ಕೆಎಸ್ಸಾರ್ಟಿಸಿಯಿಂದ ರೂ.31.10 ಕೋಟಿ ಪರಿಹಾರ ವಿತರಣೆ
ಬೆಂಗಳೂರು, ಏಪ್ರಿಲ್ 26:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವತಿಯಿಂದ ಉದ್ಯೋಗಿಗಳ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಇಂದು ಪರಿಹಾರ ಮೊತ್ತವನ್ನು ವಿತರಿಸಲಾಯಿತು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅಪಘಾತದಿಂದ ಮೃತಪಟ್ಟ ಇಬ್ಬರು ಸಿಬ್ಬಂದಿಗಳ ಕುಟುಂಬಗಳಿಗೆ ತಲಾ ರೂ.1 ಕೋಟಿಯಂತೆ ಒಟ್ಟು ರೂ.2 ಕೋಟಿ, ಇತರ ಕಾರಣಗಳಿಂದ ಮೃತರಾದ 31 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.10 ಲಕ್ಷದಂತೆ ಒಟ್ಟು ರೂ.3.10 ಕೋಟಿ ಹಾಗೂ ಅಪಘಾತದಲ್ಲಿ ಗಾಯಗೊಂಡು ಕಾಲು ಕಳೆದುಕೊಂಡ ಸಿಬ್ಬಂದಿಗೆ ರೂ.25 ಲಕ್ಷ ಪರಿಹಾರ ಚೆಕ್ಸ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಸಿಬ್ಬಂದಿಯ ಜೀವ ಅಮೂಲ್ಯ. ಅವರು ಮರಳಿಸಿಕೊಳ್ಳಲಾಗದು, ಆದರೆ ಅವರ ಕುಟುಂಬದವರ ಭವಿಷ್ಯ ಭದ್ರವಾಗಿರಲಿ ಎಂಬ ಉದ್ದೇಶದಿಂದ ಸಾರಿಗೆ ಸುರಕ್ಷಾ ಯೋಜನೆ ಜಾರಿಯಾಗಿದೆ,” ಎಂದು ಹೇಳಿದರು.

ಅಲ್ಲದೆ, ‘ಕೆಎಸ್‌ಆರ್‌ಟಿಸಿ ಆರೋಗ್ಯ’ ಯೋಜನೆಯಡಿಯಲ್ಲಿ 300ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಲಾಗಿದ್ದು, ಇದರಿಂದ 56,000ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅವರ ಕುಟುಂಬದವರು ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ, ಕರ್ತವ್ಯ ನಿರ್ವಹಣೆಯ ವೇಳೆ ಕಾಲು ಕಳೆದುಕೊಂಡ ಆರಕಲಗೂಡು ಘಟಕದ ಚಾಲಕ-ನಿರ್ವಾಹಕ ಸುನಿಲ್ ಕುಮಾರ್ ಬಿ.ಡಿ. ಅವರಿಗೆ ರೂ.25 ಲಕ್ಷ ಪರಿಹಾರ ಮತ್ತು ತಾಂತ್ರಿಕ ಸಹಾಯಕ ಹುದ್ದೆ ನೀಡಲಾಗಿತು.
ಇದೇ ರೀತಿ, ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆಯಡಿ ಇತ್ತೀಚೆಗೆ 94 ಮಂದಿಗೆ ತಲಾ ರೂ.10 ಲಕ್ಷಗಳಂತೆ ಪರಿಹಾರ ವಿತರಿಸಲಾಗಿದ್ದು, ಇಂದು 31 ಮಂದಿಗೆ ಹೊಸದಾಗಿ ಪರಿಹಾರ ಧನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಬೆಂ.ಮ.ಸಾ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್, ನಿರ್ದೇಶಕಿ ಡಾ. ನಂದಿನಿ ದೇವಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



Post Comment