ಮಂಗಳೂರು: ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಡನೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪಗಳು ಶಕ್ತವಾಗಿ ಕೇಳಿಬಂದಿದ್ದು, ಈ ಸಂಬಂಧದ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿವೆ. ಅಲ್ಲದೆ ನಿರ್ವಾಹಕನನ್ನು ಕೊಣಾಜೆ ಪೊಲೀಸರು ಬಂದಿಸಿದ್ದಾರೆ.
ಮೂಲಗಳ ಪ್ರಕಾರ, ಮೇಲ್ನೋಟಕ್ಕೆ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ. ಘಟನೆಯ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ್ದಾರೆ.
“ಪ್ರತಿಯೊಬ್ಬ ಮಹಿಳಾ ಪ್ರಯಾಣಿಕನೊಡನೆ ಗೌರವಯುತವಾಗಿ ನಡೆದುಕೊಳ್ಳುವುದು ಕೆಎಸ್ಸಾರ್ಟಿಸಿ ಸಿಬ್ಬಂದಿಗಳ ಆದ್ಯ ಕರ್ತವ್ಯ. ಈ ರೀತಿಯ ಅಸಭ್ಯ ವರ್ತನೆ ಅಕ್ಷಮ್ಯ ಅಪರಾಧವಾಗಿದೆ,” ಎಂದು ಸಾರಿಗೆ ಸಚಿವರು ಹೇಳಿದ್ದಾರೆ.
ಸಂಸ್ಥೆಯ ಗೌರವ ಮತ್ತು ಸಾರ್ವಜನಿಕ ನಂಬಿಕೆಗೆ ಧಕ್ಕೆಯಾಗುವಂತಹ ಈ ಘಟನೆಯ ಕುರಿತು ಕೂಡಲೇ ವಿಚಾರಣಾ ಪ್ರಕ್ರಿಯೆ ಆರಂಭಿಸಿ, ನಿರ್ವಾಹಕನನ್ನು ವಜಾಗೊಳಿಸುವಂತೆ ಸಾರಿಗೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Post Comment