×

ರಾಜ್ಯದಲ್ಲಿ ಕ್ಯಾಂಪಸ್ ತೆರೆಯಲು ಪೋರ್ಟ್ಸ್ ಮೌತ್ ವಿವಿ ಒಲವು, ಕೈಗಾರಿಕಾ ಸಚಿವರ ಭೇಟಿ

ಬೆಂಗಳೂರು: ರಾಜ್ಯದಲ್ಲಿ ತನ್ನದೇ ಆದ ಕ್ಯಾಂಪಸ್ ಸ್ಥಾಪಿಸಲು ಆಸಕ್ತಿ ಹೊಂದಿರುವ ಬ್ರಿಟನ್ನಿನ ಪ್ರತಿಷ್ಠಿತ ಪೋರ್ಟ್ಸ್ ಮೌತ್ ವಿಶ್ವವಿದ್ಯಾಲಯದ ಉನ್ನತ ಮಟ್ಟದ ನಿಯೋಗವು ಗುರುವಾರ ಇಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಭೇಟಿ ಮಾಡಿ, ಚರ್ಚಿಸಿತು.

ಈ ವೇಳೆ ಸಚಿವರು, `ವಿದೇಶಿ ವಿಶ್ವವಿದ್ಯಾಲಯಗಳು ಸಹಭಾಗಿತ್ವದ ಮೂಲಕ ಅಥವಾ ಸ್ವತಂತ್ರವಾಗಿಯೇ ರಾಜ್ಯದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಮುಂದೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದಕ್ಕೆ ಬೇಕಾದ ಭೂಮಿ ಮತ್ತಿತರ ಸೌಲಭ್ಯಗಳನ್ನು ಸರಕಾರವು ನೀಡಲಿದೆ. ಯುಜಿಸಿ ನಿಯಮಾವಳಿಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಮೊದಲ 500 ಸ್ಥಾನದಲ್ಲಿರುವ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ಎಲ್ಲಿ ಬೇಕಾದರೂ ತಮ್ಮ ಕ್ಯಾಂಪಸ್ ತೆರೆಯಲು ಅವಕಾಶವಿದೆ’ ಎಂದು ನಿಯೋಗಕ್ಕೆ ಮನದಟ್ಟು ಮಾಡಿಕೊಟ್ಟರು.

ಬೆಂಗಳೂರಿಗೆ ಹತ್ತಿರದಲ್ಲೇ ಇರುವ ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವೆ 5,000 ಎಕರೆಗೂ ಹೆಚ್ಚು ವಿಶಾಲವಾದ ಜಾಗದಲ್ಲಿ ಕ್ವಿನ್ ಸಿಟಿ ಅಸ್ತಿತ್ವಕ್ಕೆ ಬರುತ್ತಿದೆ. ಇಲ್ಲಿ ಜ್ಞಾನಕ್ಕೆ ಮೊದಲ ಪ್ರಾಶಸ್ತ್ಯವಿರಲಿದ್ದು, ದೇಶ-ವಿದೇಶಗಳ ಅಗ್ರಮಾನ್ಯ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಇಲ್ಲಿರುವಂತೆ ನೋಡಿಕೊಳ್ಳಲಾಗುವುದು. ಇಲ್ಲಿ ಒಟ್ಟು ಯೋಜನೆಗೆ 48 ಸಾವಿರ ಕೋಟಿ ರೂ. ಹೂಡಿಕೆಯಾಗುತ್ತಿದೆ. ಶಿಕ್ಷಣದ ಜತೆಗೆ ಇಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳಿಗೂ ಆದ್ಯತೆ ಇರಲಿದೆ. ಪೋರ್ಟ್ಸ್ ಮೌತ್ ವಿಶ್ವವಿದ್ಯಾಲಯದ ಸದಸ್ಯರಿಗೆ ಇದನ್ನು ಕೂಡ ವಿವರಿಸಲಾಗಿದೆ. ಇದರ ಭಾಗವಾಗಿ, ಯೋಜನೆಯ ಪ್ರಾತ್ಯಕ್ಷಿಕೆಯನ್ನು ನಿಯೋಗಕ್ಕೆ ತೋರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪೋರ್ಟ್ಸ್ ಮೌತ್ ವಿ.ವಿ.ದ ಕುಲಾದಿಪತಿ (ಜಾಗತಿಕ ವಿಭಾಗ) ಪ್ರೊ.ಬಾಬಿ ಮೆಹತಾ, `ಸಹಭಾಗಿತ್ವದ ಮೂಲಕ ರಾಜ್ಯದಲ್ಲಿ ತಮ್ಮ ವಿ.ವಿ.ದ ಕ್ಯಾಂಪಸ್ ಸ್ಥಾಪಿಸಬೇಕೆಂಬುದು ತಮ್ಮ ಆಸಕ್ತಿಯಾಗಿದೆ. ಇದು ಸಾಧ್ಯವಾದರೆ, ರಾಜ್ಯದ ಯುವಜನರಿಗೆ ಕೈಗೆಟುಕುವ ವೆಚ್ಚದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಕ್ವಿನ್ ಸಿಟಿ ಪ್ರದೇಶಕ್ಕೂ ಭೇಟಿ ನೀಡಲಾಗುವುದು’ ಎಂದರು.

ನಿಯೋಗದಲ್ಲಿ ಐಎಸ್ಡಿಸಿ ನಿರ್ದೇಶಕ ಸುಬಿ ಕುರಿಯನ್, ಸಹಭಾಗಿತ್ವ ಮುಖ್ಯಸ್ಥ ಶೋನ್ ಬಾಬು, ವ್ಯವಸ್ಥಾಪಕ ಗಗನ್ ಒಬೆರಾಯ್, ಯುಎಸ್ಡಿಸಿ ಹಿರಿಯ ಉಪಾಧ್ಯಕ್ಷ ವಿವೇಕ್ ಭಟ್ಟಾಚಾರ್ಯ, ಜತಿನ್ ಖಂಡೇಲ್ವಾಲ್ ಇದ್ದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Previous post

ಮೇ.20ರೊಳಗೆ ಎಸಿ ನ್ಯಾಯಾಲಯಗಳಲ್ಲಿರುವ ಬಾಕಿ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ

Next post

ಸಾರಿಗೆ ಇಲಾಖೆಯಲ್ಲಿ ಬಡ್ತಿ ಲೋಪದೋಷ: ನಕಲಿ ಪ್ರಮಾಣಪತ್ರಗಳಿಂದ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳು ಗಿಟ್ಟಿಸಿಕೊಂಡ ಆರೋಪ

Post Comment

You May Have Missed