ಸಿಎಂ ಸಿದ್ದರಾಮಯ್ಯ ಸಚಿವ ರಾಮಲಿಂಗ ರೆಡ್ಡಿಗೆ ಅಭಿನಂದಿಸಿದ ಅರ್ಚಕ ಸಮುದಾಯ
ಬೆಂಗಳೂರು: ಸರ್ಕಾರದ ಬಜೆಟ್ನಲ್ಲಿ ಅರ್ಚಕರ ತಸ್ತೀಕ್ ಮೊತ್ತವನ್ನು ರೂ.60,000 ರಿಂದ ರೂ.72,000 ಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಅರ್ಚಕ ಸಮುದಾಯದಿಂದ ಶುಭಕೋರಿದ್ದಾರೆ.

ಇದೇ ರೀತಿ 2013, 2015, 2017 ಮತ್ತು ಈಗ 2025ರಲ್ಲಿ ಒಟ್ಟು ನಾಲ್ಕು ಬಾರಿ ತಸ್ತೀಕ್ ಮೊತ್ತವನ್ನು ಹೆಚ್ಚಿಸಿದ ಕೀರ್ತಿ ಸಿದ್ಧರಾಮಯ್ಯ ಅವರದ್ದಾಗಿದೆ. ಈ ನಿರ್ಣಯದಿಂದಾಗಿ ಅರ್ಚಕರು, ಆಗಮಿಕರು ಮತ್ತು ಉಪಾಧಿವಂತರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಮುಜರಾಯಿ ಇಲಾಖೆಯಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಪ್ರಾರಂಭವಾಗಿದೆ.

ರಾಮಲಿಂಗಾ ರೆಡ್ಡಿ ಅವರು ಈಗಾಗಲೇ ಅರ್ಚಕರ ಕಣ್ಮಣಿ ಮತ್ತು ಕರ್ನಾಟಕದ ಬಂಗಾರದ ಮನುಷ್ಯ ಎಂದು ಪ್ರಸಿದ್ಧರಾಗಿದ್ದಾರೆ. ಮುಜರಾಯಿ ಇಲಾಖೆಯಲ್ಲಿ ಧಾರ್ಮಿಕ ಸ್ನೇಹಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಿ, ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡು ಇತಿಹಾಸ ಸೃಷ್ಟಿಸಿರುವ ಏಕೈಕ ಮುಜರಾಯಿ ಸಚಿವರಾಗಿ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ಉಪಾಧಿವಂತರ ಒಕ್ಕೂಟದ ರಾಜ್ಯಾಧ್ಯಕ್ಷರು ದಿನೇಶ್ ಗುಂಡೂರಾವ್, ಗೌರವ ಪ್ರಧಾನ ಸಲಹೆಗಾರರು ಪ್ರೊ. ಡಾ. ರಾಧಾಕೃಷ್ಣ ಕೆ.ಇ., ಗೌರವ ಉಪಾಧ್ಯಕ್ಷರು ಡಾ. ಎಸ್.ಆರ್. ಶೇಷಾದ್ರಿ ಭಟ್ಟರ್, ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಸ್.ಎನ್. ದೀಕ್ಷಿತ್ ಹಾಗೂ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷರು ಶ್ರೀವತ್ಸ ಅವರು ಮುಜರಾಯಿ ಸಚಿವರಿಗೆ ಹೃದಯತುಂಬಿ ಅಭಿನಂದನೆ ಸಲ್ಲಿಸಿದ್ದಾರೆ.
ಮುಜರಾಯಿ ಇಲಾಖೆ ಆಯುಕ್ತರು ಡಾ. ವೆಂಕಟೇಶ್ ಅವರಿಗೂ ಸಂಘದ ಪದಾಧಿಕಾರಿಗಳು ಶುಭಕೋರಿದರು. ಈ ನಿರ್ಣಯವನ್ನು ಅರ್ಚಕ ಸಮುದಾಯವು ಸ್ವಾಗತಿಸಿದೆ ಮತ್ತು ಸರ್ಕಾರದ ಈ ಹೆಜ್ಜೆಯನ್ನು ಧಾರ್ಮಿಕ ಸಮಾಜದ ಅಭಿವೃದ್ಧಿಗೆ ದೊಡ್ಡ ಪ್ರೋತ್ಸಾಹ ಎಂದು ಪರಿಗಣಿಸಿದೆ.
Post Comment