ಬೆಂಗಳೂರು: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಆರ್ಎಸ್ಟಿಸಿ) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಅಧಿಕಾರಿಗಳ ತಂಡವು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್ಆರ್ಟಿಸಿ) ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ, ಕೆಎಸ್ಆರ್ಟಿಸಿಯ ಕಾರ್ಮಿಕ ಸ್ನೇಹಿ ಮತ್ತು ಪ್ರಯಾಣಿಕ ಸ್ನೇಹಿ ಉಪಕ್ರಮಗಳು, ಸಾರಿಗೆಯೇತರ ಆದಾಯ ಮೂಲಗಳು ಹಾಗೂ ಇತರ ನೂತನ ಯೋಜನೆಗಳ ಕುರಿತು ವಿವರವಾದ ಮಾಹಿತಿ ಪಡೆದುಕೊಂಡರು.

ಕೆಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ವಿ. ಅನ್ಬುಕುಮಾರ್ ರವರು ಕೆಆರ್ಎಸ್ಟಿಸಿ ತಂಡಕ್ಕೆ ನಿಗಮದ ಕಾರ್ಯಾಚರಣೆ, ಬಸ್ ನಿರ್ವಹಣೆ, ಪುನಶ್ಚೇತನ ಕಾರ್ಯಗಳು, ರೂ. 1 ಕೋಟಿ ಮೌಲ್ಯದ On duty/Off duty ಅಪಘಾತ ವಿಮಾ ಯೋಜನೆ, ಕೆಎಸ್ಆರ್ಟಿಸಿ ಆರೋಗ್ಯ ಯೋಜನೆ, ವಿದ್ಯಾ ಚೇತನ ಯೋಜನೆ ಮುಂತಾದವುಗಳ ಬಗ್ಗೆ ವಿವರಿಸಿದರು. ಇದರ ಜೊತೆಗೆ, HRMS, ಆನ್ಲೈನ್ ಜಿಯೋ ಟ್ಯಾಗ್ ಹಾಜರಾತಿ, ಬಿಸಿನೆಸ್ ಇಂಟೆಲಿಜೆಂಟ್ ಡ್ಯಾಶ್‌ಬೋರ್ಡ್, AWATAR 4.0, UPI ಮುಂತಾದ ಮಾಹಿತಿ ತಂತ್ರಜ್ಞಾನ ಉಪಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.

ಕೆಆರ್ಎಸ್ಟಿಸಿ ತಂಡವು ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2 ಅನ್ನು ಭೇಟಿ ಮಾಡಿ, ಬಸ್ ಬ್ರಾಂಡಿಂಗ್ ಮತ್ತು ನಿರ್ವಹಣೆ ಕಾರ್ಯಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿಯ ನಿರ್ದೇಶಕರು ಡಾ. ನಂದಿನಿದೇವಿ ಕೆ., ಇತರ ಹಿರಿಯ ಅಧಿಕಾರಿಗಳು ಹಾಗೂ ಕೆಆರ್ಎಸ್ಟಿಸಿಯ ಎ. ಶಾಜಿ (ಆರ್ಥಿಕ ಸಲಹೆಗಾರರು ಮತ್ತು ಮುಖ್ಯ ಲೆಕ್ಕಾಧಿಕಾರಿ), ಉಲ್ಲಾಸ್‌ಬಾಬು (ಪ್ರಧಾನ ವ್ಯವಸ್ಥಾಪಕರು, ಎಸ್ಟೇಟ್), ನಿಶಾಂತ್ ಎಸ್. (ಉಪ ಪ್ರಧಾನ ವ್ಯವಸ್ಥಾಪಕರು, ಐಟಿ), ನವೀನ್ ಎನ್.ಐ. (ಸಮನ್ವಯ ಅಧಿಕಾರಿ, ಇಂಧನ ವಿಭಾಗ) ಮತ್ತು ಜರ್ಮನಿ ಸರ್ಕಾರದ ಪ್ರತಿನಿಧಿ ಶಿರೀಸ್ ಮಹೇಂದ್ರು ರವರು ಉಪಸ್ಥಿತರಿದ್ದರು.

ಈ ಭೇಟಿಯು ಎರಡೂ ರಾಜ್ಯಗಳ ರಸ್ತೆ ಸಾರಿಗೆ ನಿಗಮಗಳ ನಡುವೆ ಉತ್ತಮ ಅಭ್ಯಾಸಗಳು ಮತ್ತು ತಂತ್ರಜ್ಞಾನಗಳನ್ನು ಹಂಚಿಕೊಳ್ಳುವ ದಿಶೆಯಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಹೇಳಲಾಗಿದೆ.
Post Comment