ಟೀಮ್ ಇಂಡಿಯಾ ಟಿ20 ವಿಶ್ವಕಪ್‍ನಲ್ಲಿ ಗೆಲುವುಗಳನ್ನು ದಾಖಲಿಸಿ ಅಜೇಯ ಸಾಧನೆ ಮಾಡಿದೆ. ಯಾವ ವಿಶ್ವಕಪ್‍ನಲ್ಲೂ ಸಿಗದ ಯಶಸ್ಸು ಟೀಂ ಇಂಡಿಯಾಗೆ ಈ ವಿಶ್ವಕಪ್‍ನಲ್ಲಿ ಸಿಕ್ಕಿದೆ. ಈ ಯಶಸ್ಸಿನ ಹಿಂದೆ ನಮ್ಮ ಕನ್ನಡಿಗನೊಬ್ಬ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದಾನೆ.
ಹೌದು, ರೋಹಿತ್ ತಂಡದ ಯಶಸ್ಸಿನ ಹಿಂದೆ ಕನ್ನಡಿಗನೊಬ್ಬನಿದ್ದಾನೆ. ಈ ಬಾರಿಯ ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾದ್ದು ಅಜೇಯ ಸಾಧನೆ. ಈ ಯಶಸ್ಸಿಗೆ ಕಾರಣ ಟೀಮ್ ಇಂಡಿಯಾ ಆಟಗಾರರು ಎನ್ನುವುದು ನಿಜ. ಆದರೆ ತೆರೆಯ ಹಿಂದೆ ನಿಂತು ತಂಡದ ಯಶಸ್ಸಿಗೆ ಕಾರಣರಾದವರು ಬೇರೆಯೇ ಇದ್ದಾರೆ. ಅವರಲ್ಲೊಬ್ಬ, ನಮ್ಮ ಕನ್ನಡಿಗ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹುಡುಗ ರಾಘವೇಂದ್ರ ದೀವಗಿ.
ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ 2011ರಲ್ಲೇ ಟೀಂ ಇಂಡಿಯಾ ಪಾಳೆಯ ಸೇರಿಕೊಂಡಿರುವ ರಾಘವೇಂದ್ರ, ವಿಶ್ವಕಪ್‍ನಲ್ಲಿ ತಂಡದ ಯಶಸ್ಸಿಗೆ ಕಾರಣನಾಗಿ ನಿಂತಿದ್ದಾನೆ. ಥ್ರೋಡೌನ್ ಎಕ್ಸ್ಪರ್ಟ್ ಆಗಿರುವ ರಾಘವೇಂದ್ರ, ಅಭ್ಯಾಸದ ಸಂದರ್ಭದಲ್ಲಿ ಎಲ್ಲಾ ಆಟಗಾರರಿಗೂ ಬೌನ್ಸರ್, ಶಾರ್ಚ್ ಬಾಲ್‍ಗಳನ್ನು ಎಸೆದು ಅವರ ಯಶಸ್ಸಿಗೆ ಕಾರಣನಾಗಿದ್ದಾನೆ.
ಪ್ರತೀ ಬ್ಯಾಟ್ಸಮನ್ ಗೂ ಎಸೀತಾನೆ 300 ಎಸೆತ..!
ಟೀಂ ಇಂಡಿಯಾ ಅಭ್ಯಾಸದ ವೇಳೆ ನಮ್ಮ ರಾಘವೇಂದ್ರಗೆ ಎಲ್ಲರಿಗಿಂತ ಹೆಚ್ಚು ಡಿಮ್ಯಾಂಡ್. ಆಟಗಾರರೆಲ್ಲಾ ಒಬ್ಬೊಬ್ಬರಾಗಿ ರಾಘು ಜೊತೆ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಾರೆ. ಪ್ರತಿಯೊಬ್ಬ ಬ್ಯಾಟ್ಸಮನ್‍ಗೂ ರಾಘವೇಂದ್ರ ತಲಾ 300 ಎಸೆತಗಳನ್ನು ಎಸೆಯುತ್ತಾನೆ. ಹೀಗೆ ರಾಘವೇಂದ್ರ ದಿನವೊಂದಕ್ಕೆ ಸರಿ ಸುಮಾರು 3000 ಎಸೆತಗಳನ್ನು ಬ್ಯಾಟ್ಸಮನ್ಗಳಿಗೆ ಎಸೆಯುತ್ತಾನೆ.
ಸೈಡ್ ಆರ್ಮ್ ಎಂಬ ವಿಶೇಷ ಸಾಧನದಿಂದ ರಾಘವೇಂದ್ರ ಥ್ರೋಡೌನ್ ಪ್ರಾಕ್ಟೀಸ್ ಮಾಡಿಸುವುದರಲ್ಲಿ ನಿಸ್ಸೀಮ. ಇಷ್ಟೇ ಅಲ್ಲ, ಗಗನದೆತ್ತರಕ್ಕೆ ಚೆಂಡನ್ನು ಬಾರಿಸಿ ಕ್ಯಾಚಿಂಗ್ ಪ್ರಾಕ್ಟೀಸ್ ಮಾಡಿಸುವುದರಲ್ಲೂ ಈತನದ್ದು ಎತ್ತಿದ ಕೈ. ಒಂದರ್ಥದಲ್ಲಿ ರಾಘವೇಂದ್ರ ಟೀಮ್ ಇಂಡಿಯಾ ಪಾಲಿನ ಆಸ್ತಿ ಅಂದ್ರೂ ತಪ್ಪಲ್ಲ.
ಕನ್ನಡಿಗನೊಬ್ಬ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಯಶಸ್ಸಿಗೆ ಕಾರಣವಾಗಿರುವುದು ಕರ್ನಾಟಕ ರಾಜ್ಜಕ್ಕೆ ಉತ್ತರಕನ್ನಡ ಜಿಲ್ಲೆಗೆ ಹೆಮ್ಮೆಯ ವಿಚಾರ.
Post Comment