“ಬೆಳಗಾವಿ ಚಲೋ, ಮುಷ್ಕರದ ನೋಟಿಸ್ ನೀಡುವುದು ಈ ಸಂದರ್ಭದಲ್ಲಿ ತರವಲ್ಲ”
ಬೆಂಗಳೂರು: ನೌಕರರ ಸಂಘಟನೆಗಳೊಂದಿಗೆ ಅವರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದು, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಮೊತ್ತ ಪಾವತಿಸಲು ರೂ.224 ಕೋಟಿ ಗಳನ್ನು ನೀಡಲು ಸರ್ಕಾರವು ದಿನಾಂಕ: 07.12 2024 ರಂದು ಸರ್ಕಾರಿ ಆದೇಶ ಹೊರಡಿಸಿದೆ. ಅಧಿವೇಶನದ ನಂತರ ಹಣ ಬಿಡುಗಡೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣೆಯ ಪಟ್ಟಿ ಬಿಡುಗಡೆ ಮಾಡಲಾಗಿದೆ. ಭವಿಷ್ಯನಿಧಿ ಮತ್ತು ಡೀಸೆಲ್ ಬಾಕಿ ಹಣ ಪಾವತಿಗಾಗಿ ಸರ್ಕಾರವೇ ಗ್ಯಾರೆಂಟಿ ನೀಡಿ ರೂ.2000 ಕೋಟಿ ಲೋನ್ ನೀಡಿದೆ. ಆರೋಗ್ಯದ ಕಾರಣದಿಂದಾಗಿ ವೈಯಕ್ತಿಕವಾಗಿ ಸಭೆ ನಡೆಸಲು ಸಾಧ್ಯವಾಗದೆ, ಈ ಎಲ್ಲಾ ವಿಷಯಗಳನ್ನು ಕಾರ್ಮಿಕ ಸಂಘಟನೆಗಳಿಗೆ ತಿಳಿಸಲು ವ್ಯವಸ್ಥಾಪಕ ನಿರ್ದೇಶಕರು ಕೆ ಸ್ ಆರ್ ಟಿ ಸಿ ರವರಿಗೆ ಸೂಚಿಸಿದ್ದು, ಅದರಂತೆ ಅವರು ಸಭೆ ನಡೆಸಿ ಮಾಹಿತಿ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆ ಮತ್ತು ಬಸ್ಸುಗಳು ಜನರ ಜೀವನಾಡಿ. ಇತ್ತೀಚಿನ ದಿನಗಳಲ್ಲಿ 5800 ಹೊಸ ಬಸ್ಸುಗಳ ಸೇರ್ಪಡೆ, 10000 ಹೊಸ ನೇಮಕಾತಿಗಳು ಹಾಗೂ ಹತ್ತು ಹಲವು ಕಾರ್ಮಿಕ ಕಲ್ಯಾಣ ಉಪಕ್ರಮಗಳು ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ. ಸಾರಿಗೆ ಸಿಬ್ಬಂದಿಗಳ ಬಗ್ಗೆ ಅಪಾರವಾದ ಕಾಳಜಿಯಿದ್ದು, ಅವರ ಹಲವು ವರ್ಷಗಳ ಬೇಡಿಕೆಯಾದ ನಗದು ರಹಿತ ಆರೋಗ್ಯ ಸೇವೆಗೂ ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಭವಿಷ್ಯನಿಧಿ, ಡೀಸೆಲ್ ಬಾಕಿ, ಉಪಧನ, ನಿವೃತ್ತ ನೌಕರರ ಬಾಕಿ ಎಲ್ಲಾ ಸೇರಿ ರೂ5900 ಕೋಟಿ ಸಾಲ ಬಾಕಿ ಉಳಿದಿರುವ ಕಾರಣ ಸಾರಿಗೆ ಸಂಸ್ಥೆಗಳನ್ನು ಸಹಜ ಸ್ಥಿತಿಗೆ ತರಲು ಕಾಲಾವಕಾಶದ ಅಗತ್ಯವಿದೆ. ಇವೆಲ್ಲವುಗಳ ಬಗ್ಗೆ ಕಾರ್ಮಿಕ ಮುಖಂಡರುಗಳಿಗೆ, ಸಂಘಟನೆಗಳಿಗೆ ಸಂಪೂರ್ಣ ಮಾಹಿತಿಯಿದೆ. ಸಾರಿಗೆ ಸಂಸ್ಥೆಗಳು ಯಾವ ಸ್ಥಿತಿಯಲ್ಲಿವೆ, ಹಿಂದಿನಿಂದಲೂ ಎಷ್ಟು ನಷ್ಟದಲ್ಲಿವೆ, ಬಾಕಿ ಹಣ ಎಷ್ಟು ಕೊಡಬೇಕಾಗಿದೆ ಎಂಬುದು ತಿಳಿದಿದೆ.
ಈ ಎಲ್ಲಾ ಪರಿಸ್ಥಿತಿಗಳನ್ನು ಅರಿತಿರುವ ಕಾರ್ಮಿಕ ಸಂಘಟನೆಗಳಾದ ಅಖಂಡ ಕರ್ನಾಟಕ ರಾಜ್ಯ ಸಾರಿಗೆ ಕಾರ್ಮಿಕ ಮಹಾಮಂಡಳಿ (ರಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ), ಕೆ ಎಸ್ ಆರ್ ಟಿ ಸಿ ನಿಗಮಗಳ ಎಸ್ಸಿ /ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಸ್ಸಿ /ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಸಮನ್ವಯ ಸಮಿತಿ (ರಿ), ಕೆಬಿಎನ್ಎನ್ ವರ್ಕರ್ಸ್ ಫೆಡರೇಶನ್ (ರಿ), ಕೆ.ಎಸ್.ಆರ್.ಟಿ.ಸಿ/ಬಿ.ಎಂ.ಟಿ.ಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್, ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ, KSRTC Officers Welfare Association (KOWA) ಹಾಗೂ Supervisory staff Associations ರವರುಗಳು ಸಹ ಬೆಳಗಾವಿ ಚಲೋಗೆ ಕೈ ಜೋಡಿಸಿಲ್ಲ ಹಾಗೂ ಮುಷ್ಕರ ಕ್ಕೂ ಆಸಕ್ತಿ ತೋರುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇಂತಹ ಸಂದರ್ಭದಲ್ಲಿ ಬೆಳಗಾವಿ ಚಲೋ ನಡೆಸಿ ಮುಷ್ಕರಕ್ಕೆ ನೋಟಿಸ್ ನೀಡುವುದು ಸೂಕ್ತವಲ್ಲ. ಕಾರ್ಮಿಕ ಸಂಘಟನೆಗಳ ಇತರೆ ಬೇಡಿಕೆಗಳ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳವರ ಗಮನಕ್ಕೆ ಕೂಡ ತರಲಾಗಿದ್ದು, ಸಚಿವರ ಆರೋಗ್ಯ ಸುಧಾರಣೆ ನಂತರ ಮಾತುಕತೆ ಪುನಾರಂಭಿಸಲಾಗುವುದು ಎಂಬುದನ್ನು ತಿಳಿದು ಬಂದಿದೆ.
Post Comment