×

ಸುಳ್ಳು, ಜನರನ್ನು ದಾರಿ ತಪ್ಪಿಸುವುದು ಬಿಜೆ‌ಪಿ ಪಕ್ಷಕ್ಕೆ ಸಿದ್ದಿಸಿರುವ ಕಲೆ: ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಸುಳ್ಳು ಹೇಳುವುದು, ಜನರ ದಾರಿ ತಪ್ಪಿಸುವುದು ತಮಗೆ ಮತ್ತು ತಮ್ಮ ಬಿ.ಜೆ‌.ಪಿ ಪಕ್ಷಕ್ಕೆ ಸಿದ್ದಿಸಿರುವ ಕಲೆ. ನಮಗೆ ಅದರ ಅವಶ್ಯಕತೆಯಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದೇ ಸ್ಥಳ ಮತ್ತು ಸಮಯವನ್ನು ನಿಗದಿ ಮಾಡಿ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ‌. ಅಂಕಿಅಂಶಗಳೇ ನಮ್ಮ‌ ಅಭಿವೃದ್ಧಿಗೆ ಹಾಗೂ ಸಾಧನೆಗೆ ಮಾನದಂಡ ಎಂಬುದನ್ನು ಹತ್ತು ಹಲವು ಬಾರಿ ನಾನು ತಿಳಿಸಿದ್ದೇನೆ‌ ಎಂದು ಸಚಿವರು ಸವಾಲೆಸೆದಿದ್ದಾರೆ.

ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಂದು ನಿಲ್ಲಿಸಿರುವುದು ತಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ಎಂಬುದಕ್ಕೆ ಶ್ಚೇತಪತ್ರ ಹೊರಡಿಸಿ ತಮ್ಮ ಅವಧಿಯ ಆಡಳಿತವನ್ನು ಜನರಿಗೆ ತೋರಿಸಬೇಕೆಂಬ ತಮ್ಮ ಮಹದಾಸೆಗೆ ನಾವು ಅಭಾರಿ. ನಮ್ಮ ಸರ್ಕಾರದ‌ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ‌ ಗಣನೀಯ ವೃದ್ಧಿಯಾದರೂ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಾಧ್ಯವಾಗಿಲ್ಲದಿರುವುದು ತಮ್ಮ ಸರ್ಕಾರದ ಕೊಡುಗೆ. ಶಕ್ತಿ ಯೋಜನೆಯಿಂದ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ 84 ಲಕ್ಷದಿಂದ 1.08 ಕೋಟಿಗೆ ಏರಿಕೆ ಆಗಿದೆ. ಆದಾಯದಲ್ಲಿ ಗಣನೀಯ ವೃದ್ಧಿ ಆಗಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.

ನಾವು ಈಗಾಗಲೇ ಹಲವು ಬಾರಿ ತಿಳಿಸಿದ್ದೇನೆ, ಆದಾಯವೇ ಬೇರೆ ಲಾಭವೇ ಬೇರೆ. ಆದಾಯದಲ್ಲಿ ಗಣನೀಯ ಹೆಚ್ಚಳವಾಗಿದ್ದರೂ ಸಹ ಲಾಭವನ್ನು ಗಳಿಸಲು ಸಾಧ್ಯವಿಲ್ಲ, ಏಕೆಂದರೆ ತಮ್ಮ ಪಕ್ಷದವರು ಬಾಕಿ ಇಟ್ಟು ಹೋಗಿರುವ ರೂ.5900 ಕೋಟಿ ನಷ್ಟ ಸಾರಿಗೆ ಸಚಿವರಾಗಿ, ಹಲವು ಬಾರಿ ಅನೇಕ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರೂ, ಈ ಬಗ್ಗೆ ತಮಗೆ ಅರ್ಥವಾಗದಿದ್ದರೆ ನಾನು ಏನು ಮಾಡಲು ಸಾಧ್ಯ. ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಸಂಗ್ರಹಿಸಿ ನಂತರ ಟ್ಟೀಟ್ ಮಾಡಿದರೆ‌ ಒಳಿತು ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಬಿ.ಜೆ.ಪಿ ಪಕ್ಷದ ಆಡಳಿತದ ಐದು ವರ್ಷಗಳಲ್ಲಿ ಬಿಎಸ್ ಯಡಿಯೂರಪ್ಪ‌ ಹಾಗೂ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ,
ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ನಷ್ಟದಲ್ಲಿಟ್ಟು ಹೋಗಿದ್ದಾರೆ.

ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ‌ ಹೊರತುಪಡಿಸಿ ಬೇರೆ ಯಾವುದೇ‌ ಸಾರಿಗೆ ನಿಗಮಗಳಿಗೆ ಬಸ್‌ಗಳ ಸೇರ್ಪಡೆಯೇ ಮಾಡದೆ, ಡಕೋಟ ಬಸ್ಸುಗಳನ್ನು ಕಾರ್ಯಾಚರಣೆ‌ ಮಾಡಲು ಬಿಟ್ಟು ಹೋಗಿದ್ದೀರಾ ಎಂದು ಟಕ್ಕರ್ ನೀಡಿದ್ದಾರೆ.

ನಮ್ಮ ಸರ್ಕಾರ 6200 ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಕಳೆದೊಂದು ವರ್ಷದಲ್ಲಿಯೇ 3450 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ. ಡಕೋಟಾ ಬಸ್ಸುಗಳನ್ನು‌ ಪುನಶ್ಚೇತನ‌ ಮಾಡುವ ಕಾರ್ಯವನ್ನು ಸಹ ಕೈಗೆತ್ತಿಕೊಂಡು 1300 ಬಸ್ಸುಗಳ ಪುನಶ್ಚೇತನ ‌ಕಾರ್ಯ‌ಮಾಡಿದ್ದೇವೆ.

ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ‌ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ ( ನಿವೃತ್ತಿ ಇನ್ನಿತರೆ ಕಾರಣಗಳಿಂದ ) ಒಂದೇ ಒಂದು‌ ನೇಮಕಾತಿ ಮಾಡಿಲ್ಲ. ನಮ್ಮ ಸರ್ಕಾರ ಬಂದ ಕೂಡಲೇ 9000 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದು, ಈಗಾಗಲೇ 5800 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ವಿವಿಧ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

“ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ , ಅರ್ಧವೇತನ ,ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು ಈ ಬಗ್ಗೆ ತಮಗೆ ಮಾಹಿತಿ ಇಲ್ಲವೇ? ನಮ್ಮ ಸರ್ಕಾರ ಬಂದ ಮೇಲೆ ನಿಗದಿತ ದಿನಾಂಕದಂದು ನೌಕರರಿಗೆ ವೇತನ ಪಾವತಿಯಾಗುತ್ತಿದೆ. ಸಾರಿಗೆ ಸಂಸ್ಥೆಗಳಲ್ಲಿ ಹತ್ತು ಹಲವು ಕಾರ್ಮಿಕ‌ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕಳೆದ ಏಳೆಂಟು ವರ್ಷಗಳಿಂದ ಬಾಕಿ ಉಳಿದಿದ್ದ 1000 ಕ್ಕೂ ಅಧಿಕ ಮೃತ ಅವಲಂಬಿತ‌ ಕುಟುಂಬಗಳಿಗೆ ಅನುಕಂಪ ಆಧಾರದಲ್ಲಿ ಹುದ್ದೆ ನೀಡಲಾಗಿದೆ ಕಳೆದ‌ 5 ವರ್ಷದಲ್ಲಿ ತಮ್ಮ ಸರ್ಕಾರ ಸಂಪೂರ್ಣ ನಿಲ್ಲಿಸಿದ್ದ ಪ್ರಕ್ರಿಯೆ ಇದು ಎಂದಿದ್ದಾರೆ.

ತಮ್ಮ ಸರ್ಕಾರವು ಬಿಟ್ಟು ಹೋಗಿದ್ದ ರೂ.5900 ಕೋಟಿ‌ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ‌ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ 3,930 ಕೋಟಿ ರೂಪಾಯಿ ದಾಖಲೆ ಆದಾಯ ಬರುತ್ತದೆ ಎಂದು ಬೊಗಳೆ ಬಿಟ್ಟು ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ ಕಾಂಗ್ರೆಸ್ ಸರ್ಕಾರ ಈಗ ಕಳೆದ ತ್ರೈಮಾಸಿಕದಲ್ಲಿ ₹295 ಕೋಟಿ ನಷ್ಟವಾಗಿದೆ ಎಂಬ ನೆಪವೊಡ್ಡಿ ಟಿಕೆಟ್ ದರವನ್ನ ಶೇ.25%ರಷ್ಟು ಹೆಚ್ಚಿಸಲು ಮುಂದಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರೇ, ತಮ್ಮ ಅನುಕೂಲಕ್ಕೆ ತಕ್ಕಂತೆ, ಸುಳ್ಳಿನ ಮೇಲೆ ಸುಳ್ಳು ಹೇಳಿ, ಎಷ್ಟು ದಿನ ಹೀಗೆ ಕನ್ನಡಿಗರಿಗೆ ಮೋಸ ಮಾಡುತ್ತೀರಿ. ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ. ಸತ್ಯಾಂಶವನ್ನ ಜನರ ಮುಂದಿಡಿ ಎಂದು ಆರ್. ಅಶೋಕ್ ಟ್ವೀಟ್ ಮೂಲಕ ಪ್ರಶ್ನಿಸಿದ್ದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed