ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿಗಳಿಗೆ ಸ್ಪಷ್ಟೀಕರಣ ನೀಡಿದ ಸಚಿವರು
ಬೆಂಗಳೂರು: ನಾನು ಯಾವುದೇ ಮಾಧ್ಯಮದವರಿಗೂ ಶಕ್ತಿ ಯೋಜನೆ ನಡೆಸಲು ಸಾರಿಗೆ ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ ಎಂಬ ಹೇಳಿಕೆಯನ್ನೇ ನೀಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಈ ರೀತಿಯ ಹೇಳಿಕೆಗಳು ವಿನಾ ಕಾರಣ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಶಕ್ತಿ ಯೋಜನೆಯ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರವಾಗಿದೆ. ನಾನು ಮಾತನಾಡಿಯೇ ಇಲ್ಲದ ಹೇಳಿಕೆಗಳನ್ನು ಈ ರೀತಿ ಪ್ರಕಟಿಸಿರುವುದು ಸರಿಯಲ್ಲ ಎಂದಿದ್ದಾರೆ.

ನನ್ನನ್ನು ಯಾವುದೇ ಮಾಧ್ಯಮದವರು ಈ ಬಗ್ಗೆ ಸಂರ್ಪಕಿಸಿಯೇ ಇಲ್ಲ ನಾನು ಯಾರೊಂದಿಗೂ ಮಾತನಾಡಿಯೇ ಇಲ್ಲದಿರುವುದರಿಂದ ಈ ರೀತಿಯ ಹೇಳಿಕೆಗಳನ್ನು ಮಾಧ್ಯಮದವರು ಪ್ರಕಟಿಸುವ ಮುನ್ನ ನನ್ನನ್ನು ಖುದ್ದು ಸಂರ್ಪಕಿಸಿ ಪ್ರಕಟಿಸಲು ಕೋರಿದ್ದಾಗಿ ಹೇಳಿದ್ದಾರೆ.
ಶಕ್ತಿ ಯೋಜನೆ ರಾಜ್ಯದ ಮಹಿಳೆಯರಿಗೆ ನಮ್ಮ ಸರಕಾರ ನೀಡಿದ ಮಹತ್ವದ ಯೋಜನೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬಹುದೊಡ್ಡ ಆಸರೆಯಾಗಿ ಬೆಳೆದು ನಿಂತಿದೆ. ಇತರ ರಾಜ್ಯಗಳಿಗೆ ಶಕ್ತಿಯೋಜನೆ ಮಾದರಿ ಯೋಜನೆಯಾಗಿ ಮುಂದುವರಿಯುತ್ತಿದೆ. ಇಂತಹ ಮತ್ತಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರುವ ಕೆಲಸ ನಮ್ಮ ಸರಕಾರದಿಂದ ನಡೆಯಲಿದೆಯೇ ಹೊರತು ಯೋಜನೆ ನಿಲ್ಲಿಸುವ ಯಾವುದೇ ಯೋಚನೆ ಇಲ್ಲ ಎಂದು ಸಚಿವರ ಮೂಲಗಳು ಸ್ಪಷ್ಟ ಪಡಿಸಿದೆ.
Post Comment