ಬೆಂಗಳೂರು: ರಾಜ್ಯದ ಉದ್ದಿಮೆಗಳಲ್ಲಿ ಪರಭಾಶಿಕರ ಅವೈಜ್ಞಾನಿಕ ವಲಸೆಯನ್ನು ತಡೆಗಟ್ಟಲು ಹಾಗೂ ಪ್ರಾದೇಶಿಕ ಅಸಮಾನತೆಯನ್ನು ತೊಲಗಿಸಲು ತುರ್ತಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳ ಬೇಕೆಂದು ಆಮ್ ಆದ್ವಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದಿಲ್ಲಿ ಪತ್ರದ ಮೂಲಕ ಆಗ್ರಪಡಿಸಿದ್ದಾರೆ.
ಪ್ರತಿಯೊಂದು ರಾಜ್ಯಗಳಲ್ಲಿಯೂ ಮಾನವ ಅಭಿವೃದ್ಧಿಯ ಜೊತೆಜೊತೆಗೆ ಕೈಗಾರಿಕಾ ಅಭಿವೃದ್ಧಿಯು ಆಗಬೇಕೆಂಬುದು ಎಲ್ಲ ಸರ್ಕಾರಗಳ ಮೂಲ ಆಶಯವಾಗಿದ್ದು ಈ ಮೂಲಕ ಆಯಾ ರಾಜ್ಯದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆತು ಆರ್ಥಿಕ ಸುಭದ್ರತೆಯನ್ನು ಕಲ್ಪಿಸುವುದು ಸರ್ಕಾರಗಳ ಆಧ್ಯ ಕರ್ತವ್ಯ ವಾಗಿರುತ್ತದೆ.
ಈ ದಿಶೆಯಲ್ಲಿ ಕಳೆದ ಹಲವು ದಶಕಗಳಿಂದ ರಾಜ್ಯದಲ್ಲಿ ಕೈಗಾರಿಕೆಗಳಿಗೋಸ್ಕರ ನಮ್ಮ ನಾಡಿನ ರೈತರುಗಳು ತಾವು ಕಷ್ಟಪಟ್ಟು ಉಳುಮೆ ಮಾಡಿಕೊಂಡು ಜೀವನ ಕಟ್ಟಿಕೊಂಡು ಬಂದಿದ್ದ ತಮ್ಮ ಲಕ್ಷಾಂತರ ಎಕರೆಗಳಷ್ಟು ಜಮೀನುಗಳನ್ನು ಧಾರೆಯೆರೆದು ರಾಜ್ಯದ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ.
ಆದರೆ ಈಗಿನ ಪರಿಸ್ಥಿತಿಯಲ್ಲಿ ರೈತರ ಮೂಲ ಬದುಕಿಗೆ ಧಕ್ಕೆ ಬರುವ ರೀತಿಯಲ್ಲಿ ಹೊರ ರಾಜ್ಯಗಳ ಲಕ್ಷಾಂತರ ಕಾರ್ಮಿಕರುಗಳು ಅವೈಜ್ಞಾನಿಕವಾಗಿ ರಾಜ್ಯಕ್ಕೆ ವಲಸೆ ಬಂದು ರಾಜ್ಯದ ಉದ್ದಿಮೆಗಳಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಂಡು, ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಹಾಗೂ ಪ್ರಾದೇಶಿಕ ಸಮಾನತೆಗೆ ಕೊಡಲಿ ಪೆಟ್ಟು ನೀಡುತ್ತಿರುವ ಸಂಗತಿ ನಿಜಕ್ಕೂ ಬೇಸರತರಿಸುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಅವಲತ್ತುಕೊಂಡಿದ್ದಾರೆ.
ಕನ್ನಡಿಗರು ಕನ್ನಡ ನಾಡಿನಲ್ಲಿಯೇ ಉದ್ಯೋಗಾವಕಾಶ ಗಳಿಂದ ವಂಚಿತರಾಗಿ , ತಮ್ಮ ನೆಲದಲ್ಲಿಯೇ ಅನಾಥರಾಗಿ ಬದುಕುವಂತಹ ವಾತಾವರಣವೂ ಎಲ್ಲೆಡೆಯೂ ಮೂಡಿದೆ. ಪ್ರತಿಯೊಂದು ಉದ್ಯಮಗಳಲ್ಲಿಯೂ ಎ , ಬಿ, ಸಿ ಮತ್ತು ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಕ್ರಮವಾಗಿ 60%, ಶೇಕಡ 80% ಹಾಗೂ 100 % ನಷ್ಟು ಹುದ್ದೆಗಳು ಸಿಗಬೇಕೆಂಬ ಸರ್ಕಾರದ ಕಾನೂನು ಸಂಪೂರ್ಣ ಉಲ್ಲಂಘನೆ ಆಗುತ್ತಿದೆ. ಈ ಮೂಲಕ ಅಲ್ಲಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗೂ ಸಹ ಭಂಗವಾಗುವ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿರುವುದು ಈಗಾಗಲೇ ಸರ್ಕಾರದ ಗಮನಕ್ಕೂ ಸಹ ಬಂದಿದೆ ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿ ಗಳನ್ನು ಉಳಿಸಿಕೊಂಡು ಹಾಗೂ ಪ್ರಾದೇಶಿಕ ಅಸಮಾನತೆಯನ್ನು ತೊಲಗಿಸಲು ತಾವು ಈ ಕೂಡಲೇ ಉನ್ನತ ಹಂತದ ಅಧಿಕಾರಿಗಳ ಜೊತೆ ಸುಧೀರ್ಘ ಸಭೆಗಳನ್ನು ಮಾಡಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಕನ್ನಡ ನಾಡಿನಲ್ಲಿಯೇ ಅನಾಥರಾಗಿ ಬದುಕುತ್ತಿರುವ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡಿ ಅವರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ಅನುಕೂಲ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಆಗ್ರಹಪಡಿಸಿದ್ದಾರೆ.
Post Comment