ಚನ್ನಪಟ್ಟಣ ಕ್ಷೇತ್ರದಲ್ಲಿ ಕೇಂದ್ರ ಸಚಿವರ ಪ್ರಚಾರ
//ನಿಖಿಲ್ ಒಳ್ಳೆಯ ನಾಯಕರಾಗುತ್ತಾರೆ, ಅದಕ್ಕೆ ಚನ್ನಪಟ್ಟಣ ಜನರೇ ನಾಂದಿ ಹಾಡಲಿ ಎಂದ ಯದುವೀರ್ ಅವರು//
ಚನ್ನಪಟ್ಟಣ/ರಾಮನಗರ: ಕಾಂಗ್ರೆಸ್ ನಾಯಕರು ನನ್ನನ್ನು ನಿಂದನೆ ಮಾಡಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ನಾನು ಅಭಿವೃದ್ದಿ ವಿಚಾರ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇನೆ. ಅವರಿಗೂ ನನಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಕೇಂದ್ರ ಸಚಿವರಾದ HD ಕುಮಾರಸ್ವಾಮಿ ಅವರು ಹೇಳಿದರು.
ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಚನ್ನಪಟ್ಟಣ – ರಾಮನಗರ ನಡುವೆ ಬೃಹತ್ ಕೈಗಾರಿಕೆ ಒಂದನ್ನು ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ನಂಬಿಕೆ ಇರಿಸಿ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆಗಳನ್ನು ನೀಡಿದ್ದಾರೆ. ಎರಡೂ ಮಹತ್ವದ ಖಾತೆಗಳಾಗಿದ್ದು, ದೇವರ ಅನುಗ್ರಹ ಜನರ ಆಶೀರ್ವಾದದಿಂದ ಸಿಕ್ಕಿರುವ ಈ ಅವಕಾಶದಿಂದ ರಾಮನಗರ ಜಿಲ್ಲೆಯ ಜನರಿಗೆ ಏನಾದರೂ ಒಳ್ಳೆಯದು ಮಾಡುತ್ತೇನೆ ಎಂದು ಅವರು ಒತ್ತಿ ಹೇಳಿದರು.
ನಾವು ಟಿಕೆಟ್ ಕೊಡುತ್ತೇವೆ ಎಂದೆವು. ಬಿಜೆಪಿ ಕೂಡ ಟಿಕೆಟ್ ಕೊಡಲು ಮುಂದಾಗಿತ್ತು. ಬಿಜೆಪಿ ವರಿಷ್ಠ ನಾಯಕರ ಮಾತಿಗೆ ತಲೆಬಾಗಿ ನಾವು ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧಾರ ಮಾಡಿದ್ದೆವು. ಆದರೆ, ಎಲ್ಲರ ಮಾತನ್ನು ಧಿಕ್ಕರಿಸಿ, ಕಾಲಿನಲ್ಲಿ ಒದ್ದು ಅವರು ಕಾಂಗ್ರೆಸ್ ಸೇರಿಕೊಂಡರು. ಈಗ ನೋಡಿದರೆ ಹಾದಿಬೀದಿಯಲ್ಲಿ ಸುಳ್ಳು ಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ದೂರಿದರು.
ನನ್ನ ಬಗ್ಗೆ, ನನ್ನ ತಂದೆಯ ಬಗ್ಗೆ ಬಹಳ ಕೀಳುಮಟ್ಟದ ಭಾಷೆ ಬಳಕೆ ಮಾಡಿಕೊಂಡು ಟೀಕೆ ಮಾಡುತ್ತಿದ್ದಾರೆ. ಅವರ ಪದ ಬಳಕೆಯ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಚನ್ನಪಟ್ಟಣ ಜನರೇ ತೀರ್ಪು ಕೊಡುತ್ತಾರೆ ಎಂದು ಅವರು ಹೇಳಿದರು.
ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆಗಳು ಇವೆ ಎಂಬುದೇ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ. ಆದರೆ, ನಾನು ಏನು ಮಾಡಿದ್ದೇನೆ ಎಂಬುದು ಹಳ್ಳಿಗಳಿಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು ಕುಮಾರಸ್ವಾಮಿ ಅವರು.
ನಿವೇಶನಗಳನ್ನು ಮಾಡಿಕೊಳ್ಳಬೇಡಿ
ಕೂಡ್ಲೂರು ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ನಿಮಗೆ ನೀಡಲಾಗಿರುವ ನಿವೇಶನಗಳನ್ನು ಹಾಗೆಯೇ ಇಟ್ಟುಕೊಳ್ಳಿ. ಉಳಿದ ಗ್ರಾಮಸ್ಥರಿಗೂ ಹಕ್ಕುಪತ್ರ ಕೊಡಿಸಲಾಗುವುದು. ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು ಕೊಡಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಕೇಂದ್ರ ಸಚಿವರ ಜತೆ ಯದುವೀರ್
ಚನ್ನಪಟ್ಟಣದಲ್ಲಿ ನಡೆದ ಪ್ರಚಾರದಲ್ಲಿ ಮೈಸೂರು ಕೊಡಗು ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಅವರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು; ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ. ಅವರ ಸಂಪುಟದಲ್ಲಿ ಕುಮಾರಸ್ವಾಮಿ ಅವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಬರೀ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳಲ್ಲಿಯೇ ಮುಳುಗಿದೆ. ಅದರಲ್ಲಿ ಮೂಡಾ ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರುವರೆಗೂ ನಡೆದ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರೂ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ಮುಂದೆ ಒಳ್ಳೆಯ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶಗಳು ಇವೆ. ಅಂತಹ ಅವಕಾಶಕ್ಕೆ ಚನ್ನಪಟ್ಟಣದ ಜನರೇ ನಾಂದಿ ಹಾಡಬೇಕು ಎಂದು ಒಡೆಯರ್ ಅವರು ಹೇಳಿದರು.
ಇದಕ್ಕೂ ಮೊದಲು ಕೇಂದ್ರ ಸಚಿವರು ಯದುವೀರ್ ಅವರೊಂದಿಗೆ ಪಕ್ಷದ ಹಿರಿಯ ಮುಖಂಡ ಟಿ.ಪಿ.ಪುಟ್ಟಸಿದ್ದೇಗೌಡ ಅವರ ಮನೆಗೆ ಭೇಟಿ ನೀಡಿದ್ದರು.
Ends
HDK news
//ಮೈಸೂರು ರಾಜಮನೆತನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರದಿಂದ ಕಿರುಕುಳ//
//ಮನೆತನದಿಂದ ತಾಯಿಯನ್ನು ದೂರ ಮಾಡುವ ಕೇಡಿನ ಕೆಲಸ ಮಾಡುತ್ತಿದೆ ಸರಕಾರ//
ಕೇಂದ್ರ ಸಚಿವ HD ಕುಮಾರಸ್ವಾಮಿ ಆಕ್ರೋಶ
ಚನ್ನಪಟ್ಟಣ: ಮೈಸೂರು ರಾಜ ಮನೆತನದ ಬಗ್ಗೆ ಈ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ. ರಾಜ್ಯದ ರಾಜ್ಯದ ಅಭಿವೃದ್ಧಿಗೆ ಮಹೋನ್ನತ ಕೊಡುಗೆ ನೀಡಿರುವ ಆ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕೂಡ್ಲೂರು ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಚಾಮುಂಡೇಶ್ವರಿ ತಾಯಿ ಅರಸು ಮನೆತನದ ದೇವತೆ. ಅವರ ಕುಟುಂಬದ ಆರಾಧ್ಯದೈವ. ಅವರ ಮನೆತನದಿಂದ ದೇವರನ್ನು ದೂರ ಮಾಡುವ ಕೇಡಿನ ಕೆಲಸ ಮಾಡುತ್ತಿದೆ ಈ ಸರ್ಕಾರ ಎಂದು ಬೇಸರ ವ್ಯಕ್ತಪಡಿಸಿದರು ಸಚಿವರು.
ಚಾಮುಂಡೇಶ್ವರಿ ಪುಣ್ಯಕ್ಷೇತ್ರ ಅರಸರ ಉಸ್ತುವಾರಿತಲ್ಲಿಯೇ ಇತ್ತು. ಆ ಕ್ಷೇತ್ರದ ಅಭಿವೃದ್ಧಿಗೆ ಒಡೆಯರ್ ಸಾಕಷ್ಟು ಕೆಲಸ ಮಾಡಿದೆ. ರಾಜ್ಯದ ಅಭಿವೃದ್ಧಿಗೆ, ನೀರಾವರಿ, ಶಿಕ್ಷಣ, ಕೈಗಾರಿಕಾಭಿವೃದ್ಧಿಗೆ ಮಹಾರಾಜರು ಅನನ್ಯ ಕೊಡುಗೆ ನೀಡಿದ್ದಾರೆ. ಅಂತಹ ಕುಟುಂಬಕ್ಕೆ ಸಿದ್ದರಾಮಯ್ಯ ಇನ್ನಿಲ್ಲದ ಕಿರುಕುಳ ಕೊಡುತ್ತಿದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ರಾಜಮನೆತನ ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತಿತ್ತು. ತಾಯಿಯ ಸನ್ನಿಧಾನದಲ್ಲಿ ನಡೆಯುತ್ತಿದ್ದ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಗಳಿಂದ ನೋಡಿಕೊಳ್ಳುತ್ತಿತ್ತು. ಅಂತಹ ಕುಟುಂಬಕ್ಕೆ ಧಕ್ಕಿದ್ದ ದೇವರ ಸೇವೆ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ಕಿತ್ತುಕೊಂಡಿದೆ ಎಂದು ಅವರು ಆರೋಪ ಮಾಡಿದರು.
ರಾಜ ವಂಶಸ್ಥರು ಹಾಗೂ ಮೈಸೂರು ಕೊಡಗು ಕ್ಷೇತ್ರದ ಲೋಕಸಭೆ ಸದಸ್ಯರಾದ ಶ್ರೀ ಯದುವೀರ್ ಒಡೆಯರ್ ಅವರು ಕೂಡ ಉಪಸ್ಥಿತರಿದ್ದರು.
ದೇವರ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಸಂಜೀವರಾಯ ಸ್ವಾಮಿ ದೇವಾಲಯದಲ್ಲಿ ಹಾಗೂ ಕೂಡ್ಲೂರು ಗ್ರಾಮದಲ್ಲಿ ಶ್ರೀ ಶ್ರೀರಾಮ ದೇವರ ದೇವಾಲಯದಲ್ಲಿ ಕೇಂದ್ರ ಸಚಿವರು ಪೂಜೆ ಸಲ್ಲಿಸಿದರು.
Ends
Post Comment