ಮುಜರಾಯಿ ಇಲಾಖೆಯ ಇಬ್ಬರು ಅಧಿಕಾರಿಗಳ ಅಮಾನತು
ಬೆಂಗಳೂರು: ಸಾಮಾಜಿಕ ಜಾಲತಾಗಳಲ್ಲಿ ಹಂಚಿಗೊಂಡ ವೀಡಿಯೋದಲ್ಲಿ, ಕೆಲ ಇಲಾಖಾ ಅಧಿಕಾರಿಗಳು ದೇವಾಲಯಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿರುವ ಸಂಬಂಧ ಬಂದ ದೂರಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ರವರಿಂದ ತ್ವರಿತಗತಿಯಲ್ಲಿ ಕಠಿಣ ಕ್ರಮದ ಆದೇಶ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಆಡಿಯೋ ಸಂಭಾಷಣೆಯಲ್ಲಿ, ಬೆಂಗಳೂರು ಜಯನಗರದ ವಿನಾಯಕ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎನ್. ಮಂಜುಳ ಅವರ ಹೆಸರು ಪ್ರಸ್ತಾಪವಾಗಿದೆ. ಅವರು ಸೋಮಶೇಖರ್ ಅವರ ಸೂಚನೆ ಮೇರೆಗೆ, ದೇವಾಲಯದಿಂದ ರೂ. 25,000 ಗಳನ್ನು ದೇವಾಲಯದ ಸ್ವಚ್ಛತೆ ಕಾರ್ಯ, ಬೀಗದ ಕೀಲಿ ರಿಪೇರಿ ಮತ್ತು ಹಬ್ಬದ ಖರೀದಿಗಳ ಹೆಸರಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ಈ ಆರೋಪದ ಹಿನ್ನೆಲೆಯಲ್ಲಿ, ಇಲಾಖಾ ವರ್ತನೆ ಮತ್ತು ಹಣಕಾಸು ವಹಿವಾಟನ್ನು ಕ್ರಮಬದ್ಧವಾಗಿ ನಿರ್ವಹಿಸದ ಕಾರಣ ಟಿ.ಎನ್. ಮಂಜುಳ ಮತ್ತು ಗಿರೀಶ್ ರವರನ್ನು ಮುಜರಾಯಿ ಇಲಾಖೆ ಆಯುಕ್ತರಾದ ಡಾ.ವೆಂಕಟೇಶ್ ರವರು ಮುಜರಾಯಿ ಸಚಿವರ ಆದೇಶದಂತೆ ಅಮಾನತ್ತಿನಲ್ಲಿರಿಸಿ ಆದೇಶಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997 ಮತ್ತು 2002ರ ನಿಯಮಗಳು 01.05.2003ರಿಂದ ಜಾರಿಗೆ ಬಂದಿದ್ದು, ಅಧಿಸೂಚಿತ ದೇವಾಲಯಗಳ ಆರ್ಥಿಕ ವಹಿವಾಟು ಪಾರದರ್ಶಕವಾಗಿರಬೇಕು. ಆದರೆ ಕೆಲವು ಅಧಿಕಾರಿಗಳು ದೇವಾಲಯದ ಹಣವನ್ನು ನಕಲಿ ವೋಚರ್ಸ್ಗಗಳ ಮೂಲಕ ದುರುಪಯೋಗ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಹರಿದಾಡುತ್ತಿವೆ.
ದೇವಾಲಯದ ಯಾವುದೇ ಹಣವನ್ನು ನೌಕರರ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಚೆಕ್ ಮೂಲಕ ವಿತ್ ಡ್ರಾ ಮಾಡಲು ಅವಕಾಶವಿಲ್ಲ. ಖರ್ಚುಗಳನ್ನು ಕಾನೂನುಬದ್ಧ ರೀತಿಯಲ್ಲಿ ನಡೆಸಲು ರಾಜ್ಯದ ಆರ್ಥಿಕ ಸಂಹಿತೆ ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು. ಈ ಪ್ರಕ್ರಿಯೆ ನಿಯಮಬದ್ಧವಾಗಿದ್ದರೂ, ಕೆಲವರು ಹಣ ದುರುಪಯೋಗ ಮಾಡುವ ದೂರುಗಳು ಕೇಳಿ ಬರುತ್ತಿವೆ, ಇದರಿಂದ ಸಾರ್ವಜನಿಕ ವಲಯದಲ್ಲಿ ಇಲಾಖೆ ಬಗ್ಗೆ ಅಪಪ್ರಚಾರವಾಗುತ್ತದೆ. ಇದು ಅಕ್ಷಮ್ಯ.
ದೇವಾಲಯಗಳು ಆಧ್ಯಾತ್ಮಿಕ ಕೇಂದ್ರಗಳು, ಅಧಿಕಾರಿಗಳು ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಉತ್ತಮ ಸೇವೆ ನೀಡಬೇಕು. ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ, ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಮುಂದುವರೆದು, ಸಚಿವರು ದೇವಸ್ಥಾನಗಳ ಹಣವನ್ನು ಯಾವುದೇ ಕಾರಣಕ್ಕೂ ದುರುಪಯೋಗವಾಗಲು ಬಿಡುವುದಿಲ್ಲ, ಬೇರೆ ಅನ್ಯ ಕಾರ್ಯಗಳಿಗೆ ಬಳಸುವುದೂ ಇಲ್ಲ ಎಂಬುದನ್ನು ಪುನರುಚ್ಚಿಸಿದ್ದಾರೆ. ಈ ಬಗ್ಗೆ ಇಂದು ಸುತ್ತೋಲೆ ಕೂಡ ಮುಜರಾಯಿ ಇಲಾಖೆಯಿಂದ ಹೊರಡಿಸಲಾಗಿದೆ. ಹಾಗೂ ಮುಜರಾಯಿ ಕೇಂದ್ರ ಕಛೇರಿಯಲ್ಲಿರುವ ಕೆಲವು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಸಹ ಪರಾಮರ್ಶಿಸಿ ವರದಿ ನೀಡಲು ಮಾನ್ಯ ಸಚಿವರು ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
Post Comment