ಚನ್ನಪಟ್ಟಣ : ಶಾಲಾ ಉದ್ಘಾಟನೆಗೆ ಆಗಮಿಸಿದ ಡಿಸಿಎಂ ಅವರನ್ನು ಕಂಡ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ “ನಮ್ಮ ಶಾಲೆಗೆ ವೆಲ್ ಕಮ್ ಸಾರ್” ಎಂದು ಸ್ವಾಗತಿಸಿದರು. ನಾ ಮುಂದು ತಾ ಮುಂದು ಎಂದು ಕೈ ಕುಲುಕಿ ಹಿರಿ, ಹಿರಿ, ಹಿಗ್ಗಿದರು.
ಬೆಳಗಿನ ಪ್ರಯಾಣದ ಆಯಾಸವನ್ನು ಮರೆತ ಶಿವಕುಮಾರ್ ಅವರು “ನಾನು ಯಾರು? ನಾನು ಏನಾಗಿದ್ದೇನೆ” ಎಂದು ಕೇಳಿದಾಗ “ನೀವು ಡಿ. ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ” ಎಂದ ಮಕ್ಕಳ ಮಾತಿಗೆ ಸಂತಸಗೊಂಡರು. “ಈ ಹೊಸ ಶಾಲೆ ಕಟ್ಟಿದವರು ಯಾರು” ಎಂದಾಗ “ಟೊಯೋಟಾ ಕಂಪನಿಯವರು” ಎಂದು ಒಕ್ಕೊರಲಿನಿಂದ ಹೇಳಿದರು.
ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಟೊಯೋಟಾ ಕಿರ್ಲೊಸ್ಕರ್ ಮೋಟರ್ ಪ್ರೈವೇಟ್ ಸಂಸ್ಥೆ ಅವರು ಸಿ ಎಸ್ ಆರ್ ಅನುದಾನದ ಅಡಿ ನಿರ್ಮಾಣ ಮಾಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕೊಠಡಿಗಳನ್ನು ಶಾಲೆಯ ವಿದ್ಯಾರ್ಥಿಗಳಿಂದಲೇ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಉದ್ಘಾಟನೆ ಮಾಡಿಸಿದರು.
*ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡಿದ ಡಿಸಿಎಂ*
ಕೊಠಡಿಗಳ ಉದ್ಘಾಟನೆ ನಂತರ ಮಾಸ್ತರರಂತೆ ಮಕ್ಕಳಿಗೆ ಕ್ಷಣ ಹೊತ್ತು ಪಾಠ ಮಾಡಿದರು. “ನೆನ್ನೆ ನೆನ್ನೆಗೆ, ನಾಳಿನ ಭವಿಷ್ಯ ನಾಳೆಗೆ, ಆದರೆ ಇಂದಿನ ಭವಿಷ್ಯ ನಿಮ್ಮ ಕೈಯಲ್ಲಿದೆ. ಒಂದೊಂದು ಕ್ಷಣವನ್ನು ನೀವು ಬಳಸಿಕೊಳ್ಳಬೇಕು. ಸಮಯವನ್ನು ಹಾಳು ಮಾಡಬಾರದು” ಎಂದು ಕಿವಿ ಮಾತು ಹೇಳಿದರು.
“ಪ್ರತಿದಿನವೂ ಮುಖ್ಯವಾದ ದಿನ. ನೆನ್ನೆ, ನಾಳೆ, ಇಂದು ಎಲ್ಲವೂ ಒಳ್ಳೆ ದಿನವಲ್ಲವೇ” ಎಂದಾಗ ಮಕ್ಕಳು “ಎಸ್ ಸಾರ್” ಎಂದು ದನಿಗೂಡಿಸಿದರು.
“ಇಂದು ಯಾವ ಕಾರ್ಯಕ್ರಮ ನಡೆಯುತ್ತಿದೆ” ಎಂದು ಡಿಸಿಎಂ ಕೇಳಿದಾಗ ಮಕ್ಕಳು “ಹೊಸ ಸ್ಕೂಲ್ ಪೂಜೆ” ಎಂದರು.
Post Comment