×

“ಸಂಸ್ಥೆ ಉಳಿಯಬೇಕಾ? ಬೇಡಿಕೆ ಈಡೇರಬೇಕೆ?” ಸಾರಿಗೆ ಹೋರಾಟದ ಸುತ್ತ ಹೊಸ ವಾದ

ವಿಶೇಷ ವರದಿ: ಹಂಝಾ ಕಿನ್ಯಾ

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಹಾಗೂ ಮುಷ್ಕರದ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ವಲಯಗಳಲ್ಲಿ ಮತ್ತೊಂದು ರೀತಿಯ ಅಭಿಪ್ರಾಯಗಳು ಹರಿದಾಡತೊಡಗಿವೆ.

ಸಾರಿಗೆ ನೌಕರರ ಹೋರಾಟ, ವೇತನ ಹೆಚ್ಚಳದ ಬೇಡಿಕೆ ಮತ್ತು ಸಂಘಟನೆಗಳ ನಾಯಕತ್ವದ ಬಗ್ಗೆ ಪರ-ವಿರೋಧ ಚರ್ಚೆಗಳು ಜೋರಾಗಿದ್ದು, “ಸಂಸ್ಥೆ ಉಳಿದರೆ ಮಾತ್ರ ನೌಕರರ ಭವಿಷ್ಯ ಸುರಕ್ಷಿತ” ಎಂಬ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ.

ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ಚರ್ಚಾಕಾರರು, ಸಾರಿಗೆ ನೌಕರ ಸಂಘಟನೆಗಳ ನಾಯಕತ್ವದಲ್ಲಿರುವ ಕೆಲವರು ಸಂಸ್ಥೆಯ ಹೊರಗಿನವರು, ನಿವೃತ್ತರಾದವರು ಅಥವಾ ಸೇವೆಯಿಂದ ದೂರವಾದವರು ಎಂಬ ಆರೋಪಗಳನ್ನು ಮಾಡುತ್ತಿದ್ದು, “ನೌಕರರ ನಾಡಿಮಿಡಿತಕ್ಕಿಂತ ಭಾವನಾತ್ಮಕ ಪ್ರಚೋದನೆ ಹೆಚ್ಚಾಗಿದೆ” ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದೆಡೆ, ಸಾರಿಗೆ ನಿಗಮಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಅವುಗಳ ಆದಾಯ-ವೆಚ್ಚ ನಿರ್ವಹಣೆಯ ಹೊಣೆಗಾರಿಕೆ ನಿಗಮಗಳದ್ದೇ ಎಂಬ ವಾದವೂ ಕೇಳಿಬರುತ್ತಿದೆ. ಸರ್ಕಾರ ನೆರವು ನೀಡಬಹುದು, ಆದರೆ ವೇತನ ಪಾವತಿಯ ಸಂಪೂರ್ಣ ಹೊಣೆ ಸರ್ಕಾರದ ಮೇಲೇ ಇರಬೇಕೇ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತುತ್ತಿದ್ದಾರೆ.

ವರದಿಯ ಪ್ರಕಾರ, 2026ರ ಮಾರ್ಚ್ 31ರ ವೇಳೆಗೆ ನಾಲ್ಕು ಸಾರಿಗೆ ನಿಗಮಗಳ ಒಟ್ಟು ಬಾಕಿ ಹೊಣೆಗಾರಿಕೆ ರೂ.7130.80 ಕೋಟಿಯಷ್ಟಿದೆ ಎನ್ನಲಾಗಿದೆ. ಇದರಲ್ಲಿ ನೌಕರರ ಭವಿಷ್ಯ ನಿಧಿ ಹಾಗೂ ಇಂಧನ ಪಾವತಿ ಬಾಕಿಯೂ ಸೇರಿದೆ ಎಂದು ಉಲ್ಲೇಖಿಸಲಾಗುತ್ತಿದೆ.

ಇದಲ್ಲದೆ, ಕಳೆದ ಕೆಲವು ವರ್ಷಗಳಲ್ಲಿ ನಿಗಮಗಳು ಸಾವಿರಾರು ಕೋಟಿಗಳ ನಷ್ಟ ಅನುಭವಿಸಿರುವ ವಿವರಗಳನ್ನೂ ಕೆಲವರು ಹಂಚಿಕೊಳ್ಳುತ್ತಿದ್ದಾರೆ. ಸಿಬ್ಬಂದಿ ವೆಚ್ಚ ಹಾಗೂ ಡೀಸೆಲ್ ವೆಚ್ಚವೇ ದೊಡ್ಡ ಹೊರೆ ಆಗಿರುವುದರಿಂದ, ಮತ್ತಷ್ಟು ವೇತನ ಪರಿಷ್ಕರಣೆ ಆರ್ಥಿಕ ಒತ್ತಡ ಹೆಚ್ಚಿಸಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.

ಕಾರ್ಮಿಕ ಸಂಘಟನೆಗಳು ಆಗ್ರಹಿಸುತ್ತಿರುವ 25% ವೇತನ ಪರಿಷ್ಕರಣೆ ಜಾರಿಯಾದರೆ, ಪ್ರತಿ ತಿಂಗಳು ಸುಮಾರು ರೂ.131 ಕೋಟಿ ಹಾಗೂ ವರ್ಷಕ್ಕೆ ರೂ.1578 ಕೋಟಿಗೂ ಹೆಚ್ಚು ಹೆಚ್ಚುವರಿ ಹೊರೆ ಬೀಳಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ.

ಇದೇ ವೇಳೆ, ಸರ್ಕಾರ ಈಗಾಗಲೇ 12.5% ವೇತನ ಪರಿಷ್ಕರಣೆಗೆ ಆದೇಶ ಹೊರಡಿಸಿದ್ದು, ಸುಮಾರು 1.05 ಲಕ್ಷ ನೌಕರರಿಗೆ ಇದರ ಲಾಭ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಹಿಂಬಾಕಿ ವೇತನದ ಮೊದಲ ಕಂತಿನ ಮೊತ್ತವೂ ಬಿಡುಗಡೆಗೊಂಡಿದೆ ಎಂಬ ಮಾಹಿತಿಯೂ ಚರ್ಚೆಗೆ ಬರುತ್ತಿದೆ.

ಕೆಲವರು ದೇಶದ ಆರ್ಥಿಕ ಪರಿಸ್ಥಿತಿ, ಇಂಧನ ದರ ಏರಿಕೆ, ಐಟಿ ಕ್ಷೇತ್ರದ ಉದ್ಯೋಗ ಕಡಿತ, ಕೋವಿಡ್ ಮಾದರಿಯ ಅನಿಶ್ಚಿತ ಪರಿಸ್ಥಿತಿಗಳನ್ನು ಉಲ್ಲೇಖಿಸುತ್ತಾ, “ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ವೇತನ ಹೆಚ್ಚಳ ಸಾಧ್ಯವೇ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

SSLC ಸೇರಿದಂತೆ ವಿವಿಧ ಪರೀಕ್ಷೆಗಳು ಆರಂಭವಾಗುತ್ತಿರುವ ಸಂದರ್ಭದಲ್ಲಿ ಮುಷ್ಕರದಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರ ಉಚಿತ ಪ್ರಯಾಣ ಯೋಜನೆಗೆ ತೊಂದರೆ ಉಂಟಾಗಬಹುದು ಎಂಬ ಅಭಿಪ್ರಾಯವೂ ಕೆಲ ವಲಯಗಳಿಂದ ವ್ಯಕ್ತವಾಗುತ್ತಿದೆ.

ಒಟ್ಟಿನಲ್ಲಿ, ಸಾರಿಗೆ ನೌಕರರ ಹೋರಾಟ ಇದೀಗ ಕೇವಲ ವೇತನದ ಪ್ರಶ್ನೆಯಾಗಿಯೇ ಉಳಿಯದೇ, “ಸಂಸ್ಥೆಯ ಆರ್ಥಿಕ ಸ್ಥಿರತೆ ಮತ್ತು ನೌಕರರ ಹಿತ, ಎರಡನ್ನೂ ಹೇಗೆ ಸಮತೋಲನಗೊಳಿಸಬೇಕು?” ಎಂಬ ದೊಡ್ಡ ಚರ್ಚೆಯಾಗಿ ರೂಪಾಂತರಗೊಳ್ಳುತ್ತಿರುವುದು ಗಮನ ಸೆಳೆಯುತ್ತಿದೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed