ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ನವೀನ ಉಪಕ್ರಮಗಳು ಮತ್ತು ಡಿಜಿಟಲ್ ಸೇವೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಗುರುತಿಸಿಕೊಂಡಿದೆ. Elets Mobility Excellence 2026 ರಾಷ್ಟ್ರೀಯ ಪ್ರಶಸ್ತಿಯಲ್ಲಿ ಕೆಎಸ್‌ಆರ್‌ಟಿಸಿಗೆ ಎರಡು ಪ್ರಮುಖ ವಿಭಾಗಗಳಲ್ಲಿ ಗೌರವ ಲಭಿಸಿದೆ.
ಪ್ರಶಸ್ತಿ ಪಡೆದ ವಿಭಾಗಗಳು:
Innovation in Citizen Engagement and Inclusive Mobility ವಿಭಾಗದಲ್ಲಿ “ಧ್ವನಿಸ್ಪಂದನ” ಉಪಕ್ರಮಕ್ಕೆ
Outstanding Public Transport Digitisation Initiative ವಿಭಾಗದಲ್ಲಿ ಯುಪಿಐ ಸೌಲಭ್ಯ ಹೊಂದಿದ AWATAR 4.0 ಯೋಜನೆಗೆ ಪ್ರಶಸ್ತಿ ಲಭಿಸಿದೆ.
ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಜಾರಿಗೊಂಡಿರುವ “ಧ್ವನಿಸ್ಪಂದನ” ಯೋಜನೆ ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಮೂಲಕ ದೃಷ್ಟಿ ವಿಕಲ ಚೇತನ ಪ್ರಯಾಣಿಕರಿಗೆ ಮಹತ್ವದ ನೆರವು ನೀಡುತ್ತಿದೆ. ಜರ್ಮನಿಯ GiZ ಸಂಸ್ಥೆಯ ಸಹಯೋಗದಲ್ಲಿ ಜಾರಿಯಾದ ಈ ಯೋಜನೆಯಿಂದ ಪ್ರಯಾಣಿಕರ ಅವಲಂಬನೆ ಕಡಿಮೆಯಾಗಿದ್ದು, ಅವರ ಆತ್ಮವಿಶ್ವಾಸ, ಭದ್ರತೆ ಹಾಗೂ ಸಂಚಾರ ಸ್ವಾತಂತ್ರ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.
ಇನ್ನು “AWATAR – Anywhere Anytime Advance Reservation” ವ್ಯವಸ್ಥೆ ಕೆಎಸ್‌ಆರ್‌ಟಿಸಿಯ ಪ್ರಮುಖ ಡಿಜಿಟಲ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಾಗಿದ್ದು, ಪ್ರಯಾಣಿಕರಿಗೆ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಟಿಕೆಟ್ ಬುಕ್ಕಿಂಗ್ ಮಾಡಲು ಅನುಕೂಲ ಕಲ್ಪಿಸಿದೆ.
ನೈಜ-ಸಮಯ ಆಸನ ಲಭ್ಯತೆ, ತಕ್ಷಣದ ದೃಢೀಕರಣ ಹಾಗೂ ಸುಗಮ ಪ್ರಯಾಣ ಯೋಜನೆ ಸೌಲಭ್ಯಗಳೊಂದಿಗೆ ಈ ವ್ಯವಸ್ಥೆ ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಸುಧಾರಿಸಿದೆ.
ಇದಕ್ಕೆ ಜೊತೆಯಾಗಿ ಅಳವಡಿಸಿರುವ ಡೈನಾಮಿಕ್ ಯುಪಿಐ ಪಾವತಿ ವ್ಯವಸ್ಥೆ ವೇಗವಾದ, ಸುರಕ್ಷಿತ ಮತ್ತು ನಗದುರಹಿತ ವ್ಯವಹಾರಗಳನ್ನು ಸಾಧ್ಯವಾಗಿಸಿ ಪಾರದರ್ಶಕತೆ ಮತ್ತು ಲೆಕ್ಕಪತ್ರ ಸರಳೀಕರಣಕ್ಕೆ ಉತ್ತೇಜನ ನೀಡುತ್ತಿದೆ.
2026 ಮಾರ್ಚ್ 17ರಂದು ಹೈದರಾಬಾದ್‌ನ Novotel ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಎಸ್‌ಆರ್‌ಟಿಸಿ ಪರವಾಗಿ ನಿರ್ದೇಶಕರು (ಸಿ & ಜಾ) ಗಾಯಿತ್ರಿ ಕೆ.ಎಂ ಅವರು ತೆಲಂಗಾಣ ಸಾರಿಗೆ ಇಲಾಖೆಯ ಆಯುಕ್ತರಾದ ಕೆ. ಇಳಂಬರಿತಿ ಹಾಗೂ ಎಲೆಟ್ಸ್ ಟೆಕ್ನೋಮೀಡಿಯಾ ಸಂಸ್ಥಾಪಕರಾದ ಡಾ. ರವಿ ಗುಪ್ತಾ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಈ ಸಾಧನೆಯೊಂದಿಗೆ ಕೆಎಸ್‌ಆರ್‌ಟಿಸಿ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ನವೀನತೆ ಮತ್ತು ಡಿಜಿಟಲೀಕರಣದ ದಿಕ್ಕಿನಲ್ಲಿ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.



Post Comment