ಬೆಂಗಳೂರು: ಕೆಎಸ್ಆರ್ಟಿಸಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಉದ್ಯೋಗಾಕಾಂಕ್ಷಿಗಳಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಸುದ್ದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ.
ಕೆಲವರು ತಾವು ನಿಗಮದ ಉನ್ನತ ಅಧಿಕಾರಿಗಳು ಎಂದು ಸುಳ್ಳು ಹೇಳಿ, ನಿಗಮದ ನಕಲಿ ಲೆಟರ್ ಹೆಡ್ಗಳನ್ನು ತೋರಿಸಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಗೆ ವಂಚನೆ ಮಾಡಿರುವ ಕುರಿತು ಪೊಲೀಸ್ ಪ್ರಕರಣ ದಾಖಲಾಗಿರುವುದು ನಿಗಮದ ಗಮನಕ್ಕೆ ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಎಸ್ಆರ್ಟಿಸಿಯಲ್ಲಿ ಎಲ್ಲಾ ನೇರ ನೇಮಕಾತಿಗಳನ್ನು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸ್ವೀಕರಿಸಿ, ಮೆರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ ಗಣಕೀಕೃತ ವ್ಯವಸ್ಥೆಯ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಅಥವಾ ಶಿಫಾರಸ್ಸಿನ ಆಧಾರದ ಮೇಲೆ ನೇಮಕಾತಿಗೆ ಅವಕಾಶ ಇರುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಹೀಗಾಗಿ, ಉದ್ಯೋಗಾಕಾಂಕ್ಷಿಗಳು ಇಂತಹ ಆಮಿಷಗಳಿಗೆ ಒಳಗಾಗಬಾರದು. ಯಾರಾದರೂ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಹಣ ಕೇಳಿದಲ್ಲಿ ತಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸಾರ್ವಜನಿಕರಿಗೆ ನಿಗಮ ಮನವಿ ಮಾಡಿದೆ.
ಕೆಎಸ್ಆರ್ಟಿಸಿಯ ಎಲ್ಲಾ ನೇಮಕಾತಿ ಸಂಬಂಧಿತ ಮಾಹಿತಿಗಳು ksrtcjobs.gov.in ವೆಬ್ಸೈಟ್ನಲ್ಲಿ ಮಾತ್ರ ಪ್ರಕಟವಾಗುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



Post Comment