ಸಚಿವ ರಾಮಲಿಂಗಾ ರೆಡ್ಡಿ ಅವರ ನಾಯಕತ್ವ, ಕಾಳಜಿಯ ಫಲವಾಗಿ ಶಿಕ್ಷಣ ಮೂಲಸೌಕರ್ಯ ಅಭಿವೃದ್ಧಿ
ಬೆಂಗಳೂರು: ಬಿ.ಟಿ.ಎಂ ವಿಧಾನಸಭಾ ಕ್ಷೇತ್ರ ಇಂದು ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ರಸ್ತೆ, ಒಳಚರಂಡಿ ಹಾಗೂ ಕಸದ ನಿರ್ವಹಣೆ ಸೇರಿದಂತೆ ಅನೇಕ ಜನಸ್ನೇಹಿ ಅಭಿವೃದ್ಧಿ ಕಾರ್ಯಗಳಿಗೆ ಮಾದರಿಯಾಗುತ್ತಿದೆ. ವಿಶೇಷವಾಗಿ ಕ್ಷೇತ್ರದಲ್ಲಿನ ಸರ್ಕಾರಿ ಶಾಲಾ–ಕಾಲೇಜುಗಳು ದೇಶದಾದ್ಯಂತ ಗಮನ ಸೆಳೆಯುತ್ತಿದ್ದು, ಬಿ.ಟಿ.ಎಂ ಕ್ಷೇತ್ರವನ್ನು ಈಗ ‘ಶಿಕ್ಷಣ ಕಾಶಿ’ ಎಂದೇ ಕರೆಯಲಾಗುತ್ತಿದೆ.
ಈ ಸಾಧನೆಗೆ ಮತ್ತೊಂದು ಗರ್ವದ ಕ್ಷಣ ಸೇರ್ಪಡೆಗೊಂಡಿದೆ. ತೆಲಂಗಾಣ ಶಿಕ್ಷಣ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಮುರಳಿ ಅವರು, ಕರ್ನಾಟಕದಲ್ಲಿ ಅಭಿವೃದ್ಧಿಪಡಿಸಿರುವ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಪರಿಶೀಲಿಸಿ, ಅದನ್ನು ತೆಲಂಗಾಣದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಬಿ.ಟಿ.ಎಂ ವಿಭಾಗಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಆಡುಗೋಡಿ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿನ ಅತ್ಯಾಧುನಿಕ ವ್ಯವಸ್ಥೆಗಳನ್ನು ಕಣ್ಣಾರೆ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಶಾಲೆಯ ಗಣ್ಯರ ಭೇಟಿಯ ಪುಸ್ತಕದಲ್ಲಿ ಅವರು ತಮ್ಮ ಕೈಬರಹದಲ್ಲಿ, “ಈ ಸುಂದರ ಹಾಗೂ ಪ್ರೇರಣಾದಾಯಕ ಶಾಲೆಯನ್ನು ನೋಡಿ ತುಂಬ ಸಂತೋಷವಾಗಿದೆ. ಈ ಶಾಲೆಯಿಂದ ನಾನು ಅನೇಕ ಉತ್ತಮ ಕ್ರಮಗಳನ್ನು ಕಲಿತುಕೊಂಡಿದ್ದೇನೆ. ಈ ಕ್ಷೇತ್ರದ ಶಾಲೆಗಳ ರೂಪುಗೊಳಿಸುವಿಕೆಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೃದಯ ಮತ್ತು ಮನಸ್ಸಿನಿಂದ ತೊಡಗಿಸಿಕೊಂಡಿರುವುದು ತಿಳಿದು ಮತ್ತಷ್ಟು ಸಂತೋಷವಾಗಿದೆ” ಎಂದು ದಾಖಲಿಸಿದ್ದಾರೆ. ಜೊತೆಗೆ ಶಾಲೆಯ ಅಧಿಕಾರಿಗಳು, ಮುಖ್ಯಸ್ಥರು, ಶಿಕ್ಷಕರು ಮತ್ತು ಮಕ್ಕಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
ಬಿ.ಟಿ.ಎಂ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳು ಇಂದು ಯಾವುದೇ ಖಾಸಗಿ ಕಾರ್ಪೊರೇಟ್ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಕಂಪ್ಯೂಟರ್ ಲ್ಯಾಬ್‌ಗಳು, ಸುಸಜ್ಜಿತ ತರಗತಿ ಕೊಠಡಿಗಳು, ಮೇಜು–ಕುರ್ಚಿಗಳು, ಸ್ವಚ್ಛ ಶೌಚಾಲಯಗಳು, ಉಚಿತ ಬ್ಯಾಗು–ಸಮವಸ್ತ್ರ–ನೋಟು ಪುಸ್ತಕಗಳು, ಕ್ರೀಡಾಂಗಣ, ಅಡಿಟೋರಿಯಂ ಹಾಗೂ ಉನ್ನತ ದರ್ಜೆಯ ಶಿಕ್ಷಕ ವೃಂದ ಹೊಂದಿವೆ. ಇದರಿಂದ ಪರೀಕ್ಷಾ ಫಲಿತಾಂಶದಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 23 ಸರ್ಕಾರಿ ಶಾಲಾ/ಕಾಲೇಜುಗಳು, ಸರ್ಕಾರಿ ಅನುದಾನಿತ ಶಾಲೆಗಳು ಹಾಗೂ ಅತ್ಯಂತ ಬಡ ಜನರು ವಾಸಿಸುವ ಪ್ರದೇಶಗಳಲ್ಲಿನ ಕಾನ್ವೆಂಟ್ ಶಾಲೆಗಳಿಗೂ ಸಮಾನ ಮಟ್ಟದ ಸೌಲಭ್ಯ ಒದಗಿಸಿರುವುದು ಗಮನಾರ್ಹ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಬಡ ಹಾಗೂ ಸಾಮಾನ್ಯ ಜನರ ಮಕ್ಕಳಿಗೂ ಉನ್ನತ ಗುಣಮಟ್ಟದ ಶಿಕ್ಷಣ ನೀಡಬಹುದು ಎಂಬುದಕ್ಕೆ ಇದು ಜೀವಂತ ಸಾಕ್ಷಿಯಾಗಿದೆ.
ಸ್ಥಳೀಯ ಶಾಸಕರಾಗಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಶಿಕ್ಷಣಪರವಾದ ದೃಷ್ಟಿ, ಕಾಳಜಿ ಮತ್ತು ಕನಸು ಇಂದು ನಿಜವಾಗುತ್ತಿದೆ. ಬಡವರ ಹಾಗೂ ಜನಸಾಮಾನ್ಯರ ಮಕ್ಕಳ ಭವಿಷ್ಯವನ್ನು ರೂಪಿಸಲು ಅವರು ಕೈಗೊಂಡಿರುವ ಈ ಕಾರ್ಯವೈಖರಿ ಹಲವು ಜನರ ಹೃದಯಗಳನ್ನು ಮುಟ್ಟುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಪಡೆಯುತ್ತಿದೆ.



Post Comment