ಕೇಂದ್ರದಿಂದ ನೇರ ಬಸ್ ಖರೀದಿ ಅಲ್ಲ, ಖಾಸಗಿ ಸಂಸ್ಥೆಗಳ ಮೂಲಕ ಬಾಡಿಗೆ ವ್ಯವಸ್ಥೆ: ಕಾಂಗ್ರೆಸ್ ಸ್ಪಷ್ಟನೆ
ಬೆಂಗಳೂರು: ರಾಜ್ಯ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದಿಂದ ಬಿಎಂಟಿಸಿಗೆ 5250 ಎಲೆಕ್ಟ್ರಿಕ್ ಬಸ್ಸುಗಳನ್ನು ನೀಡುವ ಮೂಲಕ ರಾಜ್ಯಕ್ಕೆ ಗಿಫ್ಟ್ ನೀಡಿರುವಂತೆ ಮಾಹಿತಿ ಹಂಚಿಕೊಂಡಿದ್ದು, ಈ ಮಾಹಿತಿ ಸುಳ್ಳು ಎಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.
ಕೇಂದ್ರ ಸರಕಾರ ಬಸ್ಸುಗಳನ್ನು ಖಾಸಗಿ ಸಂಸ್ಥೆಗಳಿಗೆ ಬಾಡಿಗೆ/ಲೀಸ್ ಆಧಾರದಲ್ಲಿ ನೀಡಿರುವುದಾಗಿ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಜನರಿಗೆ ರಾಜಕೀಯ ಪ್ರಚಾರಕ್ಕಾಗಿ ತಪ್ಪು ಮಾಹಿತಿ ಹರಡುವುದು ಸರಿಯಲ್ಲವೆಂದು ಕಾಂಗ್ರೆಸ್ ಹೇಳಿದೆ.
ಎಲೆಕ್ಟ್ರಿಕ್ ಬಸ್ಸುಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆದು ಸಾರಿಗೆ ಸಂಸ್ಥೆಗಳಿಗೆ ನೀಡಿರುವುದನ್ನು ಕೇಂದ್ರ ಸರ್ಕಾರ ಬಸ್ ಖರೀದಿ ಮಾಡಿ ಸಾರಿಗೆ ಸಂಸ್ಥೆಗಳಿಗೆ ನೀಡಿದೆ ಎಂದು ತಪ್ಪಾಗಿ ಅರ್ಥೈಸಿ ಬೊಬ್ಬೆ ಹೊಡೆಯುವುದನ್ನು ಬಿಟ್ಟು ಬಾಡಿಗೆ/ಲೀಸ್ ಮತ್ತು ಖರೀದಿಯ ವ್ಯತ್ಯಾಸವನ್ನಾದರೂ ತಿಳಿಯಬೇಡವೇ? ಒಂದಷ್ಟಾದರೂ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಿ, ನಿಮ್ಮ ಮಾಹಿತಿಗಾಗಿ ಓದಿಕೊಳ್ಳಿ ಎಂದು ಕಾಂಗ್ರೆಸ್ ಹೇಳಿಕೆ ತಿಳಿಸಿದೆ.
ಕಾಂಗ್ರೆಸ್ ಟ್ವೀಟ್ ನಲ್ಲಿ ಏನಿದೆ:
PM e-Drive / PM e-Seva ಯೋಜನೆಗಳಡಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ 5250 ಎಲೆಕ್ಟ್ರಿಕ್ ಬಸ್ಸುಗಳನ್ನು ಕೇಂದ್ರ ಸರ್ಕಾರ ಖರೀದಿಸಿ ನೀಡಿದೆ ಎಂಬ ಭ್ರಮೆಯಲ್ಲಿ ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನೀವು ಹಂಚಿಕೊಂಡು ಸಂಭ್ರಮಿಸಿದ ವಾಸ್ತವ ಸತ್ಯ ಏನೆಂದರೆ.. ನಿಮ್ಮ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಖಾಸಗಿ ಕಂಪನಿಗಳಿಗೆ ಅಂದರೆ ಒಲೆಕ್ಟ್ರಾ, ಜೆ.ಬಿ.ಎಂ, ಟಾಟಾ, ಸ್ವಿಪ್ಟ್ ಮೊಬಿಲಿಟಿ ಅವರಿಗೆ ಅನುದಾನ ನೀಡಿ, ಖಾಸಗಿಯವರು ಸಾರಿಗೆ ಸಂಸ್ಥೆಗಳಿಗೆ ಆ ಬಸ್ಸುಗಳನ್ನು ಬಾಡಿಗೆಗೆ/ಲೀಸ್ ಆಧಾರದಲ್ಲಿ ಇಂತಿಷ್ಟು ವರ್ಷಗಳಿಗೆ ಎಂದು ನೀಡುತ್ತಿದ್ದಾರೆ ಎಂಬುದು ತಮಗೆ ತಿಳಿದಿದೆಯೇ? ಕೇಂದ್ರ ಸರ್ಕಾರವು ಅನುದಾನವನ್ನು ಖಾಸಗಿಯವರಿಗೆ ನೀಡಿ, ಸಾರಿಗೆ ಸಂಸ್ಥೆಗಳಿಗೆ ಶೂನ್ಯ ಅನುದಾನ ನೀಡುತ್ತಿರುವ ಬಗ್ಗೆ ಅರಿವಿದೆಯೇ ? ಎಲೆಕ್ಟ್ರಿಕ್ ಬಸ್ಸುಗಳ ಚಾಲಕರು ಖಾಸಗಿಯವರು, ಬಸ್ಸುಗಳ ನಿರ್ವಹಣೆ ಖಾಸಗಿಯವರದ್ದು, ಸಾರಿಗೆ ಸಂಸ್ಥೆಗಳವರದ್ದಲ್ಲ ಎಂಬುದರ ಬಗ್ಗೆ ಏನಾದರೂ ಮಾಹಿತಿಯಿದೆಯೇ? ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆಯಿಟ್ಟಿದೆ.
ಎಲೆಕ್ಟ್ರಿಕ್ ಬಸ್ ಘಟಕ ಮತ್ತು ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಯಾವುದೇ ಆರ್ಥಿಕ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬುದು ನಿಮಗೆ ಗೊತ್ತೇ? ರಾಜ್ಯದಲ್ಲಿರುವ ಕೌಶಲ್ಯಪೂರ್ಣ ಮಾನವಶಕ್ತಿಯನ್ನು ಬಳಸಿಕೊಳ್ಳಲು, ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸಲು, ಸಾರಿಗೆ ಸಂಸ್ಥೆಗಳನ್ನು ಬಲಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸದೆ ಖಾಸಗೀಕರಣದೆಡೆಗೆ ಮುಖ ಮಾಡಿದೆ ಇದನ್ನು ನೀವು ಒಪ್ಪುತ್ತೀರಾ? ಎಂದು ಕಾಂಗ್ರೆಸ್ ಹೇಳಿದೆ.
ದೇಶದ್ಯಾದಂತ ಎಲ್ಲ ನಗರಗಳಿಗೆ ಸೇರಿ PM e- Drive ನಲ್ಲಿ 10900 ಎಲೆಕ್ಟ್ರಿಕ್ ಬಸ್ಸುಗಳನ್ನು ಘೋಷಣೆ ಮಾಡಲಾಗಿದೆ. ಅದರಲ್ಲಿ ನಮ್ಮ ರಾಜ್ಯಕ್ಕೆ 4500 ಬಸ್ಸುಗಳನ್ನು ನೀಡಿರುವುದು (PM e -Seva ಹೊರತುಪಡಿಸಿ) ನಮ್ಮ ರಾಜ್ಯದ ಸಾರಿಗೆ ಸಚಿವರಾದ @RLR_BTM ಅವರ ಆಸಕ್ತಿ ಮತ್ತು ನಿರಂತರ ಪ್ರಯತ್ನದ ಫಲ ಎಂಬ ಅರಿವಿದೆಯೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಇದರೊಂದಿಗೆ ಪ್ರಮುಖ ಮಾಹಿತಿ ಗಮನದಲ್ಲಿಟ್ಟುಕೊಳ್ಳಿ.
ದೇಶದ ಬೇರೆ ಯಾವುದೇ ರಾಜ್ಯಗಳು ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ಬಗ್ಗೆ ಆಸಕ್ತಿ ತೋರದಿರುವುದರಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಎಲೆಕ್ಟ್ರಿಕ್ ಬಸ್ಸುಗಳ ಘೋಷಣೆಯಾಗಿದೆ ಎಂದು ಮಾಹಿತಿ ನೀಡಿದೆ.
UPA ಸರ್ಕಾರದ ಹತ್ತು ವರ್ಷಗಳ ಆಡಳಿತದಲ್ಲಿ (2004-2014) ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಸಾರಿಗೆ ಸಂಸ್ಥೆಗಳನ್ನು ಸದೃಢಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಕೆಲವೊಂದು ವಿಷಯಗಳನ್ನು ನೆನಪಿಸುವುದು ಸಮಂಜಸ ಎನಿಸುತ್ತದೆ. ಬೆಂಗಳೂರು ನಗರದಾದ್ಯಂತ 10 ಮತ್ತು ಮೈಸೂರು ನಗರದಲ್ಲಿ 7 ಟಿ.ಟಿ.ಎಂ.ಸಿ ಗಳನ್ನು ನಿರ್ಮಿಸಲು ಅನುದಾನವನ್ನು ನೀಡಿದ್ದರು. ಇಂದು ಅವುಗಳ ಮೌಲ್ಯ ರೂ. 10,000 ಸಾವಿರ ಕೋಟಿ ದಾಟುತ್ತದೆ. ದೇಶದ್ಯಾಂತ ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ನಗರ ಸಾರಿಗೆ ಬಸ್ಸುಗಳ ಕಾರ್ಯಾಚರಣೆ ಪ್ರಾರಂಭಗೊಂಡಿದ್ದೇ ಮನಮೋಹನ ಸಿಂಗ್ ರವರ ಸರ್ಕಾರದ ಅವಧಿಯಲ್ಲಿ ಎಂಬುದು ನೆನಪಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಅಂದು ಕೆಎಸ್ ಆರ್ ಟಿ ಸಿ, ಬಿ.ಎಂ.ಟಿ.ಸಿ, ವಾಯವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಒಟ್ಟು 2685 ನಗರ ಸಾರಿಗೆ ಬಸ್ಸುಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಶೇ.80ರ ವರೆಗೆ ಅನುದಾನ ನೀಡಿತ್ತು. ಇದರ ಫಲವಾಗಿ ಇಂದು ರಾಜ್ಯದ 31 ಜಿಲ್ಲೆಗಳಲ್ಲೂ ಉದಾಹರಣೆಗೆ ಕಲಬುರಗಿ, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಹಾಸನ,ಬೆಳಗಾವಿ, ತುಮಕೂರು, ದಾವಣಗೆರೆ, ಶಿವಮೊಗ್ಗ ಹಾಗೂ ಇತರೆ ಪಟ್ಟಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ನಗರ ಸಾರಿಗೆ ಬಸ್ಸುಗಳನ್ನು ನೋಡಬಹುದಾಗಿದೆ ಎಂದು ಮಾಹಿತಿ ನೀಡಿದೆ.
ಯಾವುದೇ ಮಾಹಿತಿಯನ್ನು ನಿಖರವಾಗಿ ತಿಳಿದುಕೊಳ್ಳದೇ, ವೃಥಾ ಪ್ರಚಾರ ಪಡೆಯುವ ಮನಸ್ಥಿತಿಯಿಂದ, ಅಪಪ್ರಚಾರದಲ್ಲಿ ತೊಡಗಿರುವ ನಿಮ್ಮ ದುರ್ಬುದ್ದಿಗೆ ಆದಷ್ಟು ಬೇಗ ಸರಿಯಾದ ಔಷಧ ಹುಡುಕಿಕೊಳ್ಳಿ ಎನ್ನುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ಟಕ್ಕರ್ ಕೊಟ್ಟಿದೆ.
Post Comment