ಮಂಗಳೂರು : ದೇಶದಲ್ಲಿ ಧರ್ಮಾದಾರಿತ ಗಲಭೆಗಳನ್ನು ಸೃಷ್ಟಿಸುವ ಮೂಲಕ ಯುವಜನತೆಯ ಉದ್ಯೋಗದ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಇದರ ಮೂಲಕ ಬಿಜೆಪಿ ಸರ್ಕಾರ ಯುವಜನತೆಗೆ ಮೋಸ ಮಾಡುತ್ತಿದೆ ಎಂದು ಡಿವೈಎಫ್ಐ ಕೇರಳ ರಾಜ್ಯ ಸಮಿತಿ ಸದಸ್ಯ ರಜೀಶ್ ವೆಳ್ಳಾಟ್ ಆರೋಪಿಸಿದ್ದಾರೆ.
ಮಂಗಳೂರಿನ ಬೆಂಗ್ರೆಯಲ್ಲಿ ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಉದ್ಯೋಗದ ಹಕ್ಕಿಗಾಗಿ ಯುವಜನ ಜಾಥಾದ ದ್ವಿತೀಯ ದಿನದ ಸಮಾರೋಪ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು “ಕೇಂದ್ರ ಸರಕಾರ ಕಳೆದ ಹತ್ತು ವರ್ಷಗಳಿಂದ ಯುವಜನತೆಯನ್ನು ಉದ್ಯೋಗ ನೀಡದೇ ವಂಚಿಸುತ್ತಾ ಬರುತ್ತಿದೆ. ದೇಶದ ಅಭಿವೃದ್ಧಿ ಎಂಬುದು ಯುವಜನತೆಯ ಅಭಿವೃದ್ಧಿಯೇ ಹೊರತು ಕಾರ್ಪೋರೆಟ್ ಕಂಪೆನಿಗಳ ಬಾಲಂಗೋಚಿಯಾಗುವುದಲ್ಲ ಎಂಬುದು ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೆನಪಿನಲ್ಲಿಡಬೇಕು. ಕರ್ನಾಟಕ ರಾಜ್ಯ ಸರಕಾರವೂ ಕೂಡಾ ಖಾಲಿ ಇರುವ ಲಕ್ಷದಷ್ಟು ಉದ್ಯೋಗವನ್ನು ಭರ್ತಿ ಮಾಡುವ ಮೂಲಕ ಯುವಜನತೆಗೆ ನ್ಯಾಯ ಒದಗಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಮಂಗಳೂರು ಸೇರಿದಂತೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಉದ್ಯೋಗ ರಹಿತರಾದ ಯುವಕರನ್ನು ಧರ್ಮದ ಹೆಸರಿನಲ್ಲಿ ನಡೆಯುವ ಗಲಭೆಗಳಿಗೆ ಬಳಸುವ ಮೂಲಕ ಬಿಜೆಪಿ ಸೇರಿದಂತೆ ಮೂಲಭೂತವಾದಿ ರಾಜಕೀಯ ಪಕ್ಷಗಳು ಯುವಜನತೆಯ ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ. ಅಭಿವೃದ್ಧಿ ರಾಜ್ಯವೆಂದು ಹೇಳಲಾಗುತ್ತುದ್ದ ಕರ್ನಾಟಕ ಇದೀಗ ಧಾರ್ಮಿಕ ಗಲಭೆಗಳಿಂದ ಗಯಜರಾತ್, ಯುಪಿ ಮಾದರಿ ರಾಜ್ಯವಾಗಿ ಮಾರ್ಪಾಡುತ್ತಿದೆ. ಇವುಗಳ ವಿರುದ್ದ ಡಿವೈಎಫ್‌ಐ ನೇತೃತ್ವದಲ್ಲಿ ನಿರಂತರ ಹೋರಾಟ ಅನಿವಾರ್ಯ” ಎಂಬುದಾಗಿ ಅಭಿಪ್ರಾಯಪಟ್ಟರು.
‘ಯುವಜನರ ನಡಿಗೆ ಉದ್ಯೋಗದ ಕಡೆಗೆ’, ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲಪಾಲ್” ಎಂಭ ಘೋಷಣೆ ಯೊಂದಿಗೆ ಡಿವೈಎಫ್‌ಐ ಜಿಲ್ಲಾ ಸಮಿತಿ ನಡೆಸುತ್ತಿರುವ ಮೂರು ದಿನಗಳ ಯುಜನ ಜಾಥಾದ ಭಾಗವಾಗಿ ಬೆಂಗ್ರೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ತಯ್ಯೂಬ್ ಬೆಂಗ್ರೆ, ನವೀನ್ ಕೊಂಚಾಡಿ, ಡಿವೈಎಫ್ ಮಾಜಿ ರಾಜ್ಯಾಧ್ಯಕ್ಷ ಸುನಿಲ್‌ಕುಮಾರ್ ಬಜಾಲ್, ಬೆಂಗ್ರೆ ಗ್ರಾಮ ಸಮಿತಿ ನಾಯಕರಾದ ಹನೀಫ್ ಬೆಂಗ್ರೆ, ನೌಶಾದ್ ಬೆಂಗ್ರೆ, ಪಿಜಿ ರಫೀಕ್ ಮುಂತಾದವರು ಭಾಗವಹಿಸಿದ್ದರು.
ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಿ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತನ್ನಿ ಎಂಬ ಬೇಡಿಕೆಯೊಂದಿಗೆ ಬೆಳ್ತಂಗಡಿ ಯಿಂದ ಆರಂಭವಾಗಿರುವ ಯುವಜನ ಜಾಥಾ ಜಿಲ್ಲೆಯಾದ್ಯಂತ ಸಂಚರಿಸಿ ಸೆ.9 ರಂದು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಸಮಾರೋಪ ಗೊಳ್ಳಲಿದೆ.
ಕೊನೆಗೆ ಪ್ರತಿರೋಧದ ಪ್ರಜ್ಞೆಯನ್ನು ಮೂಡಿಸುವ ಸೃರನ್ ಎಂಬ ಬೀದಿನಾಟಕ ಪ್ರದರ್ಶಿಸಿದರು.
Post Comment