ಸಚಿವ ರಾಮಲಿಂಗಾ ರೆಡ್ಡಿ ಅವರ ಆದೇಶದಂತೆ ಮೊದಲ ಹಂತದ ಸಂಚಾರ ಆರಂಭ
ನೆಲಮಂಗಲ: ಸುಮಾರು ಎರಡು ವರ್ಷಗಳ ಬಳಿಕ ನೆಲಮಂಗಲ ಬಸ್ ನಿಲ್ದಾಣದಿಂದ ಬಿಎಂಟಿಸಿ ಬಸ್ಸುಗಳ ಸಂಚಾರ ಇಂದು (30.08.2025) ಪುನರಾರಂಭಗೊಂಡಿದೆ.
2023ರಲ್ಲಿ ಪ್ರಾರಂಭಗೊಂಡಿದ್ದ ಬಸ್ ನಿಲ್ದಾಣ ಕಾಮಗಾರಿಯು ಕಾರಣಾಂತರಗಳಿಂದ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಸಾರಿಗೆ ಸಚಿವರ ಗಮನಕ್ಕೆ ವಿಷಯ ಬಂದ ಕೂಡಲೇ ತ್ವರಿತ ಕ್ರಮ ಕೈಗೊಳ್ಳಲಾಯಿತು.
ಇತ್ತೀಚೆಗೆ ಸಾರಿಗೆ ಹಾಗೂ ಮುಜರಾಯಿ ಸಚಿವರು, ನೆಲಮಂಗಲ ಶಾಸಕರು ಶ್ರೀನಿವಾಸ್, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ನಗರಸಭಾ ಅಧ್ಯಕ್ಷರು ಬಸ್ ನಿಲ್ದಾಣದ ಪ್ರಗತಿ ಪರಿಶೀಲನೆ ನಡೆಸಿದ್ದರು. ನಾಲ್ಕು ಬಸ್ ಬೇ ಗಳಲ್ಲಿ ಎರಡು ಬೇ ಗಳ ಕಾಮಗಾರಿ ಪೂರ್ಣಗೊಂಡಿದ್ದು, ಇವುಗಳನ್ನು ತಕ್ಷಣವೇ ಕಾರ್ಯಾಚರಣೆಗೆ ಬಳಸುವಂತೆ ಸಚಿವರು ಸೂಚಿಸಿದ್ದರು.
ಇನ್ನುಳಿದ ಎರಡು ಬೇ ಗಳ ಕಾಮಗಾರಿ 30 ದಿನಗಳಲ್ಲಿ ಪೂರ್ಣಗೊಳ್ಳುವಂತೆ ಸೂಚನೆ ನೀಡಲಾಗಿದೆ. ಬಸ್ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಕಟ್ಟಡ ಹಾಗೂ ಪ್ರವೇಶ ರಸ್ತೆಯ ಅಗಲ ಹೆಚ್ಚಿಸುವ ಕುರಿತು ಸಹ ಚರ್ಚೆ ನಡೆಯಿತು.
ಬಾಕಿ ಕೆಲಸಗಳನ್ನು ಶೀಘ್ರ ಪೂರೈಸಿ, ಒಂದು ವರ್ಷದೊಳಗೆ ಸಂಪೂರ್ಣ ಬಸ್ ನಿಲ್ದಾಣ ನಿರ್ಮಾಣವನ್ನು ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.
ಸಚಿವರ ನಿರ್ದೇಶನದಂತೆ ಈಗಾಗಲೇ ಪೂರ್ಣಗೊಂಡ ಬೇ ಗಳಲ್ಲಿ ಬಿಎಂಟಿಸಿ ಬಸ್ಸುಗಳು ಕಾರ್ಯಾರಂಭ ಮಾಡಿದ್ದು, ಇದರಿಂದ ನೆಲಮಂಗಲ ನಗರ ಹಾಗೂ ಸುತ್ತಮುತ್ತಲಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
Post Comment