ಬಿ.ಜೆ.ಪಿ. ಆಡಳಿತದಲ್ಲಿ ಕ್ರಮ ಯಾಕೆ ಕೈಗೊಳ್ಳಲಿಲ್ಲ? – ರಾಮಲಿಂಗಾ ರೆಡ್ಡಿ ಪ್ರಶ್ನೆ
ಬೆಂಗಳೂರು: ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಕುರಿತು ನಡೆಯುತ್ತಿರುವ ಪರ-ವಿರೋಧ ಹಾಗೂ ಅಪಪ್ರಚಾರವು ಕಳೆದ ಏಳು-ಎಂಟು ವರ್ಷಗಳಿಂದ ಮುಂದುವರಿದಿದೆ. ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿಯೂ ಈ ದೂರುಗಳು ಕೇಳಿಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
“ಈಗ ಬಿ.ಜೆ.ಪಿ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಧರ್ಮರಕ್ಷಣೆಗೆ ಕರೆ ನೀಡಿದ್ದಾರೆ. ಅವರ ತಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ, ವಿಪಕ್ಷ ನಾಯಕ ಅಶೋಕ್ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅಧಿಕಾರದಲ್ಲಿದ್ದಾಗ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಆಗ ಅಪಪ್ರಚಾರ ತಡೆಯಲು, ಷಡ್ಯಂತ್ರ ಬಯಲಿಗೆಳೆಯಲು ಯತ್ನವಾಗಲಿಲ್ಲ” ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರು ರಚಿಸಿರುವ SIT ನ ಉದ್ದೇಶ ಸತ್ಯ ಹೊರತರುವುದಾಗಿದೆ ಎಂದು ಹೇಳಿದರು. “SIT ತನಿಖೆಯಿಂದ ಧರ್ಮಸ್ಥಳದ ಕುರಿತು ಹರಿದಾಡುತ್ತಿದ್ದ ಅಪಪ್ರಚಾರಕ್ಕೆ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇದೆ. ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಗಡೆ ಅವರೇ SIT ರಚನೆಯನ್ನು ಸ್ವಾಗತಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚು ಹೇಳಿಕೆ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ” ಎಂದು ರೆಡ್ಡಿ ಹೇಳಿದರು.
ಯೂಟ್ಯೂಬರ್‌ಗಳ ಪಾತ್ರದ ಕುರಿತು ಪ್ರತಿಕ್ರಿಯಿಸಿದ ಅವರು, “ಪರ-ವಿರೋಧ ಅಭಿಪ್ರಾಯ ಹೊಂದಿರುವ ಯೂಟ್ಯೂಬರ್‌ಗಳು ಎರಡೂ ಗುಂಪಿನಲ್ಲಿದ್ದಾರೆ. ಬಿ.ಜೆ.ಪಿ. ಆಡಳಿತಾವಧಿಯಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆದಿತ್ತು. ಆಗ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ? ಬಿ.ಜೆ.ಪಿ.ಗೆ ಒಂದು ವೋಟು ಸಿಗುತ್ತದೆ ಅಂದರೆ ಸಾಕು, ಅದಕ್ಕೂ ರಾಜಕೀಯ ಮಾಡುತ್ತಾರೆ” ಎಂದು ಟೀಕಿಸಿದರು.
“SIT ತನಿಖೆಯಿಂದ ಸತ್ಯ ಬಯಲಿಗೆಳೆಯುವುದು, ಅಪಪ್ರಚಾರಕ್ಕೆ ಅಂತ್ಯ ತರುವುದೇ ನಮ್ಮ ಸರ್ಕಾರದ ಉದ್ದೇಶ. ನಮ್ಮ ನಿಲುವು ಸ್ಪಷ್ಟವಾಗಿದೆ” ಎಂದು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
Post Comment