ನಮ್ಮ ಮೆಟ್ರೋ ಶ್ರೇಯಸ್ಸಿನ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವ ನಾಟಕವನ್ನು ಬಿಚ್ಚಿಟ್ಟ ಸಚಿವ
ಬೆಂಗಳೂರು, ಆಗಸ್ಟ್ 6:
ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿ.ಜೆ.ಪಿ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ. “ನಮ್ಮ ಮೆಟ್ರೋ” ಯೋಜನೆಗೆ ಬಿ.ಜೆ.ಪಿ ಶ್ರೇಯಸ್ಸು ಸಲ್ಲಿಸುತ್ತಿರುವುದು ಸತ್ಯವನ್ನು ಮರೆಮಾಚುವ ಪ್ರಯತ್ನವಾಗಿದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
2006 ರಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಕಾಲದಲ್ಲಿ ಹಾಗೂ ರಾಜ್ಯದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಎಂ.ಜಿ. ರೋಡ್ ನಲ್ಲಿ ಮೆಟ್ರೋ ಶಂಕುಸ್ಥಾಪನೆ ನಡೆದಿದೆ ಎಂಬುದನ್ನು ಅವರು ನೆನಪಿಸಿದರು. “ನಾನು ಬೆಂಗಳೂರಿನ ಉಸ್ತುವಾರಿ ಸಚಿವನಾಗಿದ್ದಾಗ ಮೆಟ್ರೋ ಪ್ರಾರಂಭವಾಯಿತು. ನಮ್ಮ ಮೆಟ್ರೋ ಯಾವ ಪಕ್ಷದ ಸ್ವತ್ತು ಅಲ್ಲ, ಇದು ಜನರದ್ದಾಗಿದೆ” ಎಂದು ಅವರು ಹೇಳಿದರು.
ರಾಮಲಿಂಗಾ ರೆಡ್ಡಿಯವರು ರಾಜ್ಯ ಸರ್ಕಾರದ ಪಾಲು ಕುರಿತಂತೆ ನಿಖರವಾದ ವಿವರಗಳನ್ನು ಹಂಚಿಕೊಂಡಿದ್ದಾರೆ:
ಫೇಸ್ 1: ಕರ್ನಾಟಕ – 30% (ಜಮೀನೂ ಸೇರಿ), ಕೇಂದ್ರ – 25%, ಉಳಿದ 45% ಸಾಲದ ರೂಪದಲ್ಲಿ
ಫೇಸ್ 2: ಕರ್ನಾಟಕ – 30% + ಜಮೀನು ಮತ್ತು ಮಿತಿಮೀರಿದ ವೆಚ್ಚದ ಹೆಚ್ಚಿನ ಭಾಗ, ಕೇಂದ್ರ – 20%, ಉಳಿದ 50% ಸಾಲ
ಫೇಸ್ 3: ಕರ್ನಾಟಕ – 20% + ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ – 20%, ಉಳಿದ 60% ಸಾಲ
“ಪ್ರತಿ ಹಂತದಲ್ಲೂ ಕರ್ನಾಟಕ ಸರ್ಕಾರ ಜಮೀನು ಖರೀದಿ ಮತ್ತು ಹೆಚ್ಚುವರಿ ವೆಚ್ಚಗಳಿಗಾಗಿ ದೊಡ್ಡ ಮೊತ್ತಗಳನ್ನು ಖರ್ಚು ಮಾಡುತ್ತಿದೆ. ಕೇಂದ್ರದಷ್ಟೇ ಅಲ್ಲ, ಕೆಲವೊಮ್ಮೆ ಹೆಚ್ಚಿನ ಮೊತ್ತವನ್ನು ಸರ್ಕಾರ ನೀಡುತ್ತಿದೆ. ಆದರೂ ಬಿ.ಜೆ.ಪಿ ನಾಯಕರು ಈ ಸತ್ಯವನ್ನು ಮರೆಮಾಚಿ, ತಮ್ಮದೇ ಮೇರು ಸಾಧನೆ ಎಂಬಂತೆ ಜನತೆಗೆ ಬಿಂಬಿಸುತ್ತಿದ್ದಾರೆ” ಎಂದು ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಎಷ್ಟು ಕಾಲ ಬಿ.ಜೆ.ಪಿ ನಾಯಕರು ತಮ್ಮದೇ ರಾಜ್ಯದ ಕೊಡುಗೆಗೆ ಕಣ್ಣುಮುಚ್ಚಿ, ಕೇಂದ್ರದ ಉಡುಗೊರೆ ಎಂಬ ನಾಟಕ ಮುಂದುವರೆಸುತ್ತಾರೆ?” ಎಂದವರು ಪ್ರಶ್ನಿಸಿದ್ದಾರೆ.



Post Comment