ಸಚಿವ ರಾಮಲಿಂಗಾ ರೆಡ್ಡಿಯವರ ಶ್ಲಾಘನೀಯ ತೀರ್ಮಾನ
ಬೆಂಗಳೂರು, ಜುಲೈ 4:
ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಆಗಿರುವ ಮತ್ತೊಂದು ಜನಪರ ನಿರ್ಧಾರಕ್ಕೆ ನಗರದ ಜನತೆ ಹಾಗೂ ಗಾಣಿಗ ಸಮುದಾಯದಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಬೆಂಗಳೂರು ನಗರದ ಪ್ರಸಿದ್ಧ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು “ಜನೋಪಕಾರಿ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ”ವೆಂದು ಮರು ನಾಮಕರಣ ಮಾಡುವ ತೀರ್ಮಾನಕ್ಕೆ ಅಂಗೀಕಾರ ದೊರೆತಿದೆ.
ದೊಡ್ಡಣ್ಣ ಶೆಟ್ಟರು, 1906ರಲ್ಲಿ ಸ್ಥಾಪಿಸಿದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ (SLN ಚಾರಿಟಿ) ಮೂಲಕ ಬಡವರು ಮತ್ತು ಹಿಂದುಳಿದವರಿಗೆ ಶಿಕ್ಷಣ ನೀಡುವ ಮಹೋನ್ನತ ದೃಷ್ಟಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಅವರ ಈ ಸಮಾಜಸೇವೆಗೆ ಮಾನ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ “ಜನೋಪಕಾರಿ” ಎಂಬ ಗೌರವ ಬಿರುದು ನೀಡಿ ಸನ್ಮಾನಿಸಿದ್ದರು.
ಅವರು ಕಲಾಸಿಪಾಳ್ಯ ಪ್ರದೇಶದಲ್ಲಿ 5 ಎಕರೆ ಭೂಮಿಯನ್ನು ಸಾರ್ವಜನಿಕ ಬಳಕೆಗಾಗಿ ದಾನ ಮಾಡಿದ ಮಹಾನ್ ವ್ಯಕ್ತಿ. ಈ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ರವೀಂದ್ರನಾಥ ಠಾಗೋರ್ ಹಾಗೂ ಡಾ. ಅನಿಬೆಸೆಂಟ್ ಅವರು ಕೂಡ ಭಾಗವಹಿಸಿದ್ದರು.
ಈ ತೀರ್ಮಾನಕ್ಕೆ ಸುಮಾರು 7 ಲಕ್ಷ ಗಾಣಿಗ ಸಮುದಾಯದ ಸದಸ್ಯರು ಕೃತಜ್ಞತೆ ವ್ಯಕ್ತಪಡಿಸಿದ್ದು, ಇದನ್ನು ಐತಿಹಾಸಿಕ ನಿರ್ಧಾರವೆಂದು ಶ್ಲಾಘಿಸಿದ್ದಾರೆ. ಈ ಕುರಿತು ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುದರ್ಶನ್ (ಮಾಜಿ ಸಚೇತಕರು ಮತ್ತು ಅಧ್ಯಕ್ಷರು – ಚಿತ್ರಕಲಾ ಪರಿಷತ್), ಸುರೇಶ್ (ಅಧ್ಯಕ್ಷರು), ಲಕ್ಷ್ಮೀ ಸುರೇಶ್ (ಕಾರ್ಯದರ್ಶಿ), ಹಾಗೂ ನಾಗರಾಜ್ ಉಪಸ್ಥಿತರಿದ್ದರು.
Post Comment