ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಅಂಗೀಕಾರ
ಸುಬ್ರಹ್ಮಣ್ಯ: ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಯವರು ಶ್ರಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಾಲಯದ ಸಮಗ್ರ ಅಭಿವೃದ್ಧಿಗೆ ರೂಪಿಸಿರುವ ಮಾಸ್ಟರ್ ಪ್ಲಾನ್‌ಗೆ ಅಧಿಕೃತ ಮಂಜೂರಾತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅವರು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ದೇವರ ಸೇವೆಯೆಂದು ಪರಿಗಣಿಸಿ, ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಿಗೆ ಮಾರ್ಗದರ್ಶನ ನೀಡಿದರು.

ಸಚಿವರು ದೇವಾಲಯದ ಮಾಸ್ಟರ್ ಪ್ಲಾನ್‍ನ ಮೂರನೇ ಹಂತದ ಯೋಜನೆಗಳನ್ನು ಪರಿಶೀಲಿಸಿದರು. ಪ್ರಸ್ತುತ ಕೈಗೊಳ್ಳಲಾಗಿರುವ ಕಾಮಗಾರಿಗಳ ನಕ್ಷೆ ಮತ್ತು ನೀಡಲಾಗುವ ಸೌಲಭ್ಯಗಳ ಬಗ್ಗೆ ಪೂರ್ಣ ವಿವರ ಪಡೆದರು. ಸಭೆಯ ಸಂದರ್ಭ ಸಚಿವರು ಕೆಲವು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಯೋಜನೆಗೆ ಅಳವಡಿಸಿ ತಕ್ಷಣವೇ ಅನುಷ್ಠಾನಕ್ಕೆ ತರಲು ಸೂಚನೆ ನೀಡಿದರು.
ದೇವಳದ ವತಿಯಿಂದ ನಿರ್ಮಾಣಗೊಳ್ಳಲಿರುವ ದಾಸೋಹ ಭವನ, ದೇವಳದ ಸುತ್ತು ಪೌಳಿ, 800 ಕೊಠಡಿಗಳ ವಸತಿ ಗೃಹ, ನೂತನ ಪಾರಂಪರಿಕ ರಥ ಬೀದಿ ಯೋಜನೆಗಳ ಅಂತಿಮ ಹಂತದ ಕುರಿತಾಗಿ ಸಚಿವರ ನೇತೃತ್ವದಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಸುಳ್ಯ ಶಾಸಕಿ ಭಗೀರಥಿ ಮುರುಳ್ಯ, ಧಾರ್ಮಿಕ ದತ್ತಿ ಇಲಾಖೆ ಕಮೀಷನರ್ ಡಾ. ಕೆ.ವಿ. ವೆಂಕಟೇಶ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ದಾನಿಗಳ ಪ್ರತಿನಿಧಿಯಾದ ಜೈ ಪುನೀತ್, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ, ಮಲ್ಲಿಕಾ ಪಕ್ಕಳ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Post Comment