×

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜೂನ್ 17: ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮವಾಗಬೇಕಿದ್ದು, ಇದು ಅತ್ಯಂತ ಅವಶ್ಯಕವಾಗಿದೆ. ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಅವರು ಇಂದು ಅರಣ್ಯ ಜೀವಿ ಪರಿಸ್ಥಿತಿ ಮಾತು ಮತ್ತು ಪರಿಸರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ 2025 ನ್ನು ಉದ್ಘಾಟಿಸಿ ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಪರಿಸರವನ್ನು ಸಂರಕ್ಷಣೆ, ಅದರ ಬಗೆಗಿನ ಜ್ಞಾನ ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಅತ್ಯಂತ ಅವಶ್ಯ. ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ ಎಂದಿದೆ. ಇದು ಕಷ್ಟದ ಕೆಲಸವಾದರೂ ನಾವು ಮಾಡಲೇಬೇಕಾಗುತ್ತದೆ. ಪರಿಸರ ಶುದ್ಧವಾಗಿದ್ದರೆ ಜನರ ಆರೋಗ್ಯ, ಪ್ರಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ. ಪ್ರಕೃತಿ ಮನುಷ್ಯನ ಆಸೆಗಳನ್ನು ಈಡೇರಿಸುತ್ತದೆ. ಆದರೆ ದುರಾಸೆಗಳನ್ನಲ್ಲ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು ಎಂದರು.

ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟ, ವೈವಿಧ್ಯಮಯ ಕಾಡು, ನದಿಗಳು, ಜೀವ ಸಂಪತ್ತನ್ನು ನಾವು ಕಾಪಾಡಬೇಕು. ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಇದು ಬೋಧಿಸಲಾಗಿರುವ ಪ್ರತಿಜ್ಞಾ ವಿಧಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಪರಿಸರದ ಕುರಿತು ಜ್ಞಾನವನ್ನು ಬೆಳೆಸಿಕೊಳ್ಳಬೇಕಿದೆ
ಬೆಂಗಳೂರು ಒಂದರಲ್ಲೇ ದಿನವೊಂದಕ್ಕೆ 900 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. 1.50 ಜನಸಂಖ್ಯೆಯನ್ನು ಬೆಂಗಳೂರು ಹೊಂದಿದೆ. ಜನಸಂಖ್ಯೆ ಬೆಳೆದಷ್ಟು ಪರಿಸರದ ಮೇಲೆ ಹಾನಿ ಉಂಟಾಗುತ್ತಿದೆ. ದೇಶ ಜನಸಂಖ್ಯೆಯಲ್ಲಿ ನಂಬರ್ ಒನ್ ಆಗಿದೆ. ಜನಸಂಖ್ಯೆಯ ನಿಯಂತ್ರಣದ ಜೊತೆಗೆ ಪರಿಸರದ ಕುರಿತು ಜ್ಞಾನವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.

ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು
ಭೂಮಿಯಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಇದನ್ನು ಹೀಗೇ ಬಿಟ್ಟರೆ ಕರ್ನಾಟಕ ಮುಂದೆ ಮರುಭೂಮಿಯಾಗಲಿದೆ. ಅದಕ್ಕಾಗಿ ನಾವು ಈಗಲೇ ಎಚ್ಚರಿಕೆ ವಹಿಸಲೇಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದು ಕರೆ ನೀಡಿದರು.

ಪ್ಲಾಸ್ಟಿಕ್ ಗೆ ಪರ್ಯಾಯ
ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು ಎಂದರು.

ಗಿಡ ಮರಗಳನ್ನು ನೆಟ್ಟು ಬೆಳೆಸೋಣ
ಪುನರ್ಬಳಕೆ ಮತ್ತು ಮರುಬಳಕೆ ಪ್ರೋತ್ಸಾಹಿಸಿ, ಏಕ ಬಳಕೆ ಪ್ಲಾಸ್ಟಿಕ್ ನಿಲ್ಲಿಸೋಣ, ಸಾರ್ವಜನಿಕ ಸಾರಿಗೆ ಉಪಯೋಗಿಸೋಣ, ಹತ್ತಿರದ ಸ್ಥಳಗಳಿಗೆ ನಡೆದು ಹೋಗುವ ಅಥವಾ ಸೈಕಲ್ ಬಳಕೆ ಮಾಡೋಣ, ಹನಿ ಹನಿ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳೋಣ , ನೀರನ್ನು ಪೋಲು ಮಾಡದೇ ಜವಾಬ್ದಾರಿಯುತವಾಗಿ ಬಳಸೋಣ. ಸಾಧ್ಯವಾದ ಮಟ್ಟಿಗೆ ಪ್ರತಿಯೊಬ್ಬರೂ ಕರ್ತವ್ಯ ಎಂದು ಅರಿತು ‘ನನ್ನ ಜೀವ ನನ್ನ ಮರ ಎಂದು ಗಿಡ ಮರಗಳನ್ನು ನೆಟ್ಟು ಬೆಳೆಸೋಣ’ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಪರಿಸರ ನ್ಯಾಯ, ಸುಸ್ಥಿರ ಬದ್ಧತೆಗೆ ಸಂಪೂರ್ಣ ಒಪ್ಪಿಗೆ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಚಿವರಾದ ಬೈರತಿ ಸುರೇಶ್, ಡಾ; ಕೆ.ಸುಧಾಕರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ,ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Previous post

ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಲಿವ್-ಲವ್‌-ಲಫ್ ಫೌಂಡೇಶನ್ನಿಂದ ) ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಉಪಕ್ರಮ ಜಾರಿ

Next post

1350 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Post Comment

You May Have Missed