15 ದಿನಗಳೊಳಗೆ ವರದಿಗೆ ಸಚಿವರ ಆದೇಶ: ತಪ್ಪಿತಸ್ಥರಿಗೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ
ಬೆಂಗಳೂರು, ಜೂನ್ ೧೫: ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ನಿರೀಕ್ಷಕರ (Motor Vehicle Inspectors) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ನಕಲಿ ಪ್ರಮಾಣಪತ್ರಗಳ ಬಳಕೆಯ ಆರೋಪಗಳು ಹೊರಹೊಮ್ಮಿವೆ. ಆಡಳಿತ ವಿಭಾಗದ ಸಿಬ್ಬಂದಿಗಳು ಅಸ್ತಿತ್ವದಲ್ಲಿಲ್ಲದ ಕಾಲೇಜುಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ರೂ. ೧೦,೦೦೦ ರಿಂದ ೧೫,೦೦೦ ಗೆ ಅಂಕಪಟ್ಟಿಗಳನ್ನು ಖರೀದಿಸಿ ಈ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಕನ್ನಡದ ಪ್ರಮುಖ ಪತ್ರಿಕೆಗಳು ವರದಿ ಮಾಡಿವೆ.

ನಿಯಮಗಳ ಉಲ್ಲಂಘನೆ:
ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) ನಿಯಮಗಳು ೨೦೨೧ ಪ್ರಕಾರ, ೯೫% ಹುದ್ದೆಗಳು ನೇರ ನೇಮಕಾತಿ ಮೂಲಕ ಮತ್ತು ೫% ಮಾತ್ರ ಬಡ್ತಿ ಮೂಲಕ ತುಂಬಬೇಕು. ಆದರೆ, ೨೦೨೨ರಿಂದ ಶೇಕಡಾ ೫% ಮಿತಿಯನ್ನು ಮೀರಿ ಬಡ್ತಿ ನೀಡಲಾಗಿದೆಯೇ ಮತ್ತು ಈ ಸಿಬ್ಬಂದಿಗಳ ವಿದ್ಯಾರ್ಹತೆಯ ದಾಖಲೆಗಳನ್ನು ಶಿಕ್ಷಣ ಇಲಾಖೆ ಅಥವಾ ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಪರಿಶೀಲಿಸಲಾಗಿದೆಯೇ ಎಂಬುದನ್ನು ವಿಚಾರಣೆ ಮಾಡಲು ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ
೧೫ ದಿನಗಳೊಳಗೆ ವರದಿ:
ಈ ಪ್ರಕರಣಗಳಲ್ಲಿ ಲೋಪ-ದೋಷಗಳಿದ್ದರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ೧೫ ದಿನಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ನ್ಯಾಯೋಚಿತ ತನಿಖೆಯ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
Post Comment