ಚನ್ನಮ್ಮನ ಕಿತ್ತೂರಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ ಘಟಕವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು.
ರೂ.5.27 ಕೋಟಿ ವೆಚ್ಚದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ಘಟಕದಲ್ಲಿ ಪ್ರಸ್ತುತ 15 ವಾಹನಗಳ ಬಲದೊಂದಿಗೆ 15 ವೇಗದೂತ ಅನುಸೂಚಿಗಳು ಕಾರ್ಯಾಚರಣೆಗೊಳ್ಳುತ್ತಿವೆ. ಘಟಕದ ವ್ಯಾಪ್ತಿಯಲ್ಲಿ ಒಂದು ಬಸ್ ನಿಲ್ದಾಣವೂ ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದ ಸಮಗ್ರ ಸಾರಿಗೆ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಹೊಸ ಬಸ್ ನಿಲ್ದಾಣಗಳು, ಬಸ್ ಘಟಕಗಳು ಹಾಗೂ ಹೊಸ ಬಸ್ಸುಗಳ ಸೇರ್ಪಡೆಯ ಮೂಲಕ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣವನ್ನು ರೂ.23.48 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದ್ದು, ಬಾಗಲಕೋಟೆ ನವನಗರದಲ್ಲಿ ರೂ.6.56 ಕೋಟಿ ವೆಚ್ಚದಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ಹೊಸ ಬಸ್ ಘಟಕ ನಿರ್ಮಿಸಲಾಗಿದೆ. ಶಿಗ್ಗಾಂವ ಪಟ್ಟಣದಲ್ಲಿ ರೂ.8 ಕೋಟಿ ವೆಚ್ಚದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ಮತ್ತೊಂದು ನೂತನ ಬಸ್ ಘಟಕ ನಿರ್ಮಾಣಗೊಂಡಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯಲ್ಲಿ 2000 ಚಾಲನಾ ಸಿಬ್ಬಂದಿಗಳ ನೇಮಕಾತಿ ಪೂರ್ಣಗೊಂಡಿದ್ದು, ನೇಮಕಾತಿ ಆದೇಶಗಳನ್ನು ವಿತರಿಸಲಾಗಿದೆ. ಜೊತೆಗೆ ಮಾರ್ಚ್ 2024ರಿಂದ ವಿವಿಧ ಹುದ್ದೆಗಳಲ್ಲಿ ಅನುಕಂಪದ ಆಧಾರದ ಮೇಲೆ 158 ಸಿಬ್ಬಂದಿಗಳಿಗೆ ನೇಮಕಾತಿ ನೀಡಲಾಗಿದೆ. ದರ್ಜೆ-2 ಅಧಿಕಾರಿಗಳ 33 ಹುದ್ದೆಗಳ ನೇರ ಹಾಗೂ ಆಂತರಿಕ ನೇಮಕಾತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಬಾಸಾಹೇಬ ಪಾಟೀಲ್, ವಿನಯ ಬಾ. ನಾವಲಗಟ್ಟಿ, ಸುನೀಲ್ ಹನಮಣ್ಣವರ, ಪ್ರಿಯಾಂಕಾ ಎಂ. ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



Post Comment