ಮಹಿಳಾ ಸಬಲೀಕರಣದ ಸಂದೇಶದೊಂದಿಗೆ 115 ಹೊಸ ಬಸ್ಸುಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ
ಇಂದು ಕ.ರಾ.ರ.ಸಾ. ನಿಗಮದ ಕೇಂದ್ರ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ 45 ಕರ್ನಾಟಕ ಸಾರಿಗೆ ಮತ್ತು 70 ಪಲ್ಲಕ್ಕಿ ಬಸ್ಸುಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ಹೇಳಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ನೀಡಿರುವ ಮಹತ್ವದ ಕೊಡುಗೆಗಳನ್ನು ಸ್ಮರಿಸುವುದು ಹಾಗೂ ಅವರ ಹಕ್ಕುಗಳು, ಸಮಾನತೆ ಮತ್ತು ಗೌರವವನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕುಟುಂಬ, ಶಿಕ್ಷಣ, ವಿಜ್ಞಾನ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮಹತ್ತರ ಸಾಧನೆಗಳನ್ನು ಮಾಡುತ್ತಿದ್ದಾರೆ. ಮಹಿಳೆಯರ ಸಬಲೀಕರಣವು ಸಮಾಜದ ಸಮಗ್ರ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದ್ದು, ಅವರಿಗೆ ಸಮಾನ ಅವಕಾಶಗಳು ಮತ್ತು ಸುರಕ್ಷಿತ ವಾತಾವರಣ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ತದನಂತರ, ಪದ್ಮಶ್ರೀ ಪುರಸ್ಕೃತ ಡಾ. ಶುಭಾ ವಿ. ಅವರು ಭಾರತದ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಸಿ.ಎಸ್.ಐ.ಆರ್. ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ಎಎಲ್) ನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ, ಸ್ವದೇಶಿ ರನ್ವೇ ಗೋಚರತೆ ಮಾಪನ ವ್ಯವಸ್ಥೆಯಾದ ‘ದೃಷ್ಟಿ’ ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿರುವ ಬಗ್ಗೆ ಸಚಿವರು ಪ್ರಶಂಸಿಸಿದರು. ಮಂಜಿನ ಸಂದರ್ಭದಲ್ಲೂ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ಗೆ ನೆರವಾಗುವ ತಂತ್ರಜ್ಞಾನವನ್ನು ರೂಪಿಸಿರುವುದು ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು ಸುಮಾರು 1.04 ಲಕ್ಷ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ 8,956 ಮಹಿಳಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ 3167 ನಿರ್ವಾಹಕರು, 2254 ತಾಂತ್ರಿಕ ಸಿಬ್ಬಂದಿಗಳು ಮತ್ತು 3535 ಆಡಳಿತ ಸಿಬ್ಬಂದಿಗಳು ಸೇರಿದ್ದಾರೆ.
“ಶಕ್ತಿ ಯೋಜನೆ”ಯಡಿ ಮಹಿಳೆಯರಿಗೆ ನಿಗಮದ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. 2026ರ ಮಾರ್ಚ್ 12ರವರೆಗೆ 688.83 ಕೋಟಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ನಿಗಮದ 17 ವಿಭಾಗಗಳಿಂದ ತಲಾ ಒಬ್ಬರಂತೆ ಉತ್ತಮ ಕಾರ್ಯ ಸಾಧನೆ ತೋರಿದ ತಾಂತ್ರಿಕ ಸಿಬ್ಬಂದಿ-19, ನಿರ್ವಾಹಕರು-15 ಹಾಗೂ ಕರಾಸಾ ಪೇದೆ-12 ಸೇರಿ ಒಟ್ಟು 46 ಮಹಿಳಾ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಶುಭಾ ವಿ., ಕೆಎಸ್ಆರ್ಟಿಸಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಮಹಿಳೆಯರು ಪ್ರಾಮಾಣಿಕತೆ, ಬದ್ಧತೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೆ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು. ವಿಜ್ಞಾನ ಕ್ಷೇತ್ರದಲ್ಲಿ 46 ವರ್ಷಗಳ ಕಾಲ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಅವರು ತಮ್ಮ ಜೀವನದ ಸಂತೋಷದ ಘಟ್ಟವೆಂದು ವಿವರಿಸಿದರು.

ಬಸ್ಸುಗಳ ಉದ್ಘಾಟನೆ
ಈ ಸಂದರ್ಭದಲ್ಲಿ 70 ಹವಾನಿಯಂತ್ರಣ ರಹಿತ ಸ್ಲೀಪರ್ ಪಲ್ಲಕ್ಕಿ ಬಸ್ಸುಗಳು ಮತ್ತು 45 ಕರ್ನಾಟಕ ಸಾರಿಗೆ ಬಸ್ಸುಗಳಿಗೆ ಚಾಲನೆ ನೀಡಲಾಯಿತು.
ಮಾರ್ಗಗಳು: ಉಡುಪಿ, ಮಂಗಳೂರು, ಮೈಸೂರು, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಆಗುಂಬೆ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಂಪಿ, ರಾಯಚೂರು, ಜಮಖಂಡಿ, ಪುತ್ತೂರು, ಕಾಣಿಯೂರು, ಕುಕ್ಕೆ ಸುಬ್ರಹ್ಮಣ್ಯ, ಕಾಸರಗೋಡು, ಮಂತ್ರಾಲಯ, ತಿರುಚಿ, ಕೊಜಿಕ್ಕೋಡ್, ಮುನ್ನಾರ್, ಪಾಂಡಿಚೇರಿ, ತಂಜಾವೂರು, ಕೊಟ್ಟಾಯಂ, ಹೈದರಾಬಾದ್, ಚೆನ್ನೈ, ಪಣಜಿ, ಮಧುರೈ, ಕುಂಭಕೋಣಂ ಮತ್ತು ಎರ್ನಾಕುಲಂ ಸೇರಿದಂತೆ ಹಲವು ಮಾರ್ಗಗಳಲ್ಲಿ ಈ ಬಸ್ಸುಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತದೆ.
ಇದೇ ವೇಳೆ ಒಟ್ಟು 805 ಹೊಸ ಕರ್ನಾಟಕ ಸಾರಿಗೆ ಹಾಗೂ ನಗರ/ಗ್ರಾಮಾಂತರ ಸಾರಿಗೆ ವಾಹನಗಳು ಏಪ್ರಿಲ್, ಮೇ ಮತ್ತು ಜೂನ್ 2026ರಲ್ಲಿ ನಿಗಮಕ್ಕೆ ಸೇರ್ಪಡೆಯಾಗಲಿವೆ ಎಂದು ತಿಳಿಸಲಾಯಿತು.

ಮಹಿಳಾ ಸ್ನೇಹಿ ಉಪಕ್ರಮಗಳು
ಮಹಿಳಾ ನೌಕರರಿಗೆ ಅನುಕೂಲವಾಗುವಂತೆ ನಿಗಮದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುವ ನಿರ್ವಾಹಕಿಯರಿಗೆ ಮಾರ್ಗ ನಿಯೋಜನೆಯಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ವಿವಿಧ ಹುದ್ದೆಗಳಿಗೆ 77 ಮಹಿಳೆಯರನ್ನು ಅನುಕಂಪದ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಆಗುವ ಲೈಂಗಿಕ ಕಿರುಕುಳವನ್ನು ತಡೆಯಲು Sexual Harassment of Women at Workplace (Prevention, Prohibition & Redressal) Act–2013 ಅನ್ವಯ ಆಂತರಿಕ ದೂರು ಸಮಿತಿ ರಚಿಸಲಾಗಿದೆ.
ಮಹಿಳಾ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಒಂದು ದಿನ ಋತುಚಕ್ರ ರಜೆ, ರಾಜ್ಯ ಸರ್ಕಾರದ ಮಾದರಿಯಲ್ಲಿ 180 ದಿನಗಳ ಹೆರಿಗೆ ರಜೆ, ಹಾಗೂ ಶಿಶುಪಾಲನಾ ರಜೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಮೂರು ವರ್ಷ ತುಂಬುವವರೆಗೆ ಮಕ್ಕಳ ಪಾಲನೆಗಾಗಿ ಪ್ರತಿ ತಿಂಗಳು ₹1250 ಶಿಶುಪಾಲನಾ ಭತ್ಯೆ ನೀಡಲಾಗುತ್ತಿದೆ.
ಇದಲ್ಲದೆ, ಘಟಕಗಳಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ವಿಶ್ರಾಂತಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾಚೇತನ ಯೋಜನೆಯಡಿ 1747 ಹೆಣ್ಣು ಮಕ್ಕಳಿಗೆ ₹88,54,500 ವಿದ್ಯಾರ್ಥಿ ವೇತನ ನೀಡಲಾಗಿದೆ.
“ಕೆಎಸ್ಆರ್ಟಿಸಿ ಆರೋಗ್ಯ” ಯೋಜನೆಯಡಿ 92,945 ಮಹಿಳಾ ಸಿಬ್ಬಂದಿಗಳು ಹಾಗೂ ಅವರ ಅವಲಂಬಿತರು ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಪಡೆದುಕೊಂಡಿದ್ದು, ಚಿಕಿತ್ಸೆ ವೆಚ್ಚವು ಅಂದಾಜು ₹29.87 ಕೋಟಿಗಳು ಆಗಿದೆ.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುಂದುವರೆಯುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಬಲರನ್ನಾಗಿ ಮಾಡುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತ) ಗಾಯತ್ರಿ ಕೆ.ಎಂ. ಅವರು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಹಾಗೂ ಗೌರವಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.




Post Comment