×

ಕರ್ನಾಟಕದಲ್ಲಿ Geo-fencing ಆಧಾರಿತ mVahan ಫಿಟ್ನೆಸ್ ಅಪ್ಲಿಕೇಶನ್ ಜಾರಿ: ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ನೋಂದಣಿಯಾಗಿ ಚಾಲ್ತಿಯಲ್ಲಿರುವ ವಾಣಿಜ್ಯ (ಸಾರಿಗೆ) ವಾಹನಗಳ ಅಹತಾ (ಫಿಟ್ನೆಸ್) ಪ್ರಮಾಣಪತ್ರ ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಎಲ್ಲಾ 66 ಆರ್‌ಟಿಒ ಕಚೇರಿಗಳಲ್ಲಿ Geo-fencing ಆಧಾರಿತ mVahan ಫಿಟ್ನೆಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಜಾರಿಗೊಳಿಸಲಾಗಿದೆ ಎಂದು ಸಾರಿಗೆ ಮತ್ತು ಮುಜ್ರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಾಣಿಜ್ಯ ವಾಹನಗಳು ನೋಂದಣಿಯಾಗಿ ಚಾಲ್ತಿಯಲ್ಲಿದ್ದು, ಫಿಟ್ನೆಸ್ ಪ್ರಮಾಣಪತ್ರ ವಿತರಣೆಯಲ್ಲಿ ಏಕೀಕೃತ ವ್ಯವಸ್ಥೆ ಇಲ್ಲದೆ ಪಾರದರ್ಶಕತೆ ಕೊರತೆ ಇರುವ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದವು. ಕೆಲವು ಸಂದರ್ಭಗಳಲ್ಲಿ ವಾಹನ ಹಾಜರಿಲ್ಲದೇ ಫಿಟ್ನೆಸ್ ಪ್ರಮಾಣಪತ್ರ ನೀಡಲಾಗುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ NIC ಅಭಿವೃದ್ಧಿಪಡಿಸಿರುವ ಹೊಸ mVahan ಫಿಟ್ನೆಸ್ ಅಪ್ಲಿಕೇಶನ್ ಅನ್ನು ಜಾರಿಗೊಳಿಸಲಾಗಿದೆ.

ಈ ಹೊಸ ವ್ಯವಸ್ಥೆಯಡಿಯಲ್ಲಿ ಪ್ರತಿಯೊಂದು ಆರ್‌ಟಿಒ ಕಚೇರಿಯಲ್ಲೂ ವಾಹನಗಳ ಭೌತಿಕ ಪರಿಶೀಲನೆ ನಡೆಸುವ ನಿಗದಿತ ಪ್ರದೇಶಗಳನ್ನು Geo-fencing ಮೂಲಕ ಗುರುತಿಸಲಾಗಿದೆ. ನಿಗದಿತ ಪ್ರದೇಶಕ್ಕೆ ವಾಹನವು ಭೌತಿಕವಾಗಿ ಹಾಜರಾಗಿದ ನಂತರವೇ ಪರಿಶೀಲನೆ ಪ್ರಕ್ರಿಯೆ ಆರಂಭವಾಗುತ್ತದೆ. ಪರಿಶೀಲನೆಯ ವೇಳೆ ವಾಹನದ ಆರು ಕಡ್ಡಾಯ ಛಾಯಾಚಿತ್ರಗಳನ್ನು ತೆಗೆದು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಸಂಬಂಧಿತ ಅಧಿಕಾರಿಗಳ ಅನುಮೋದನೆ ಬಳಿಕವೇ ಫಿಟ್ನೆಸ್ ಪ್ರಮಾಣಪತ್ರ ನೀಡಲಾಗುತ್ತದೆ.

ನಿಗದಿತ ಪ್ರದೇಶದ ಹೊರಗೆ ಫಿಟ್ನೆಸ್ ಪ್ರಮಾಣಪತ್ರ ನೀಡುವ ಅವಕಾಶವಿಲ್ಲ. ಜೊತೆಗೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕನಿಷ್ಠ 20% ವಾಹನಗಳನ್ನು ಮರುಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಇದರಿಂದ ಯಾವುದೇ ದುರುಪಯೋಗ ಅಥವಾ ಅನಧಿಕೃತ ಕ್ರಮಗಳಿಗೆ ಕಡಿವಾಣ ಬೀಳಲಿದೆ.

ಈ ವ್ಯವಸ್ಥೆಯನ್ನು ಈಗಾಗಲೇ ಕೆಲವು ರಾಜ್ಯಗಳಲ್ಲಿ ಅಳವಡಿಸಿಕೊಂಡಿದ್ದು, ಇದೀಗ ಕರ್ನಾಟಕದಲ್ಲಿಯೂ ಜಾರಿಗೆ ತರಲಾಗಿದೆ. ಇದರ ಮೂಲಕ ಫಿಟ್ನೆಸ್ ಪ್ರಮಾಣಪತ್ರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿ, ವಾಹನ ಮಾಲೀಕರು ಹಾಗೂ ಸಾರ್ವಜನಿಕರಲ್ಲಿ ವಿಶ್ವಾಸ ವೃದ್ಧಿಯಾಗಲಿದೆ.

ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ದಿಕ್ಕಿನಲ್ಲಿ ಈ ಕ್ರಮ ಸಹಾಯಕವಾಗಿದ್ದು, ರಸ್ತೆ ಸುರಕ್ಷತೆ ಸುಧಾರಣೆಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ದೀರ್ಘಕಾಲದಿಂದಲೂ ಇದ್ದ ವ್ಯವಸ್ಥೆಯ ಬಗ್ಗೆ ವ್ಯಕ್ತವಾಗುತ್ತಿದ್ದ ಅಪಸಾರಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಹೊಸ ಡಿಜಿಟಲ್ ಕ್ರಮ ಪರಿಣಾಮಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed