ಬೆಂಗಳೂರು: ಸಾರಿಗೆ ನಿಗಮಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ರಾಜಕೀಯ ಲಾಭಕ್ಕಾಗಿ ಕುತ್ತಿಗೆ ಹಿಸುಕುತ್ತಿದೆ ಎಂದು ಟ್ವೀಟ್ ಮಾಡಿದ್ದ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ತೀವ್ರ ಪ್ರತಿಕ್ರಿಯೆ ನೀಡಿದೆ. ಈ ಮೂಲಕ ಕಾಂಗ್ರೆಸ್, ಬಿಜೆಪಿ ಆಡಳಿತಾವಧಿಯಲ್ಲಿನ ಸಾರಿಗೆ ಸಂಸ್ಥೆಗಳ ದುಸ್ಥಿತಿಯನ್ನು ವಿವರವಾಗಿ ನೆನಪಿಸಿದೆ.
ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಸೆಪಡುವವರು ಸರ್ಕಾರದ ವಿರುದ್ಧ ಟೀಕೆ ಮಾಡುವ ಮುನ್ನ ಸಮಗ್ರ ಅಧ್ಯಯನ ಮಾಡಬೇಕಾಗುತ್ತದೆ. ಆದರೆ ನಿಮ್ಮ ಟ್ವೀಟ್ನಲ್ಲೇ ನಿಮ್ಮ ಅಧ್ಯಯನದ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಮೇಲೆ ಇರುವ ಅಸೂಯೆಯೇ ನಿಮ್ಮ ಹೇಳಿಕೆಗೆ ಕಾರಣ ಎಂದು ಕಾಂಗ್ರೆಸ್ ಟೀಕಿಸಿದೆ.
ಮಹಿಳಾ ಸಬಲೀಕರಣದ ಮಹತ್ವದ ಯೋಜನೆಯಾದ ‘ಶಕ್ತಿ ಯೋಜನೆ’ಯಿಂದ ಸಾರಿಗೆ ನಿಗಮಗಳು ದುರ್ಬಲವಾಗಿವೆ ಎನ್ನುವ ನಿಮ್ಮ ವಾದ ಹಾಸ್ಯಾಸ್ಪದವಾಗಿದೆ. ನಿಮ್ಮ ಆಡಳಿತಾವಧಿಯಲ್ಲಿ ಶಕ್ತಿ ಯೋಜನೆ ಇರಲಿಲ್ಲವಾದರೂ, 2023ರಲ್ಲಿ ರೂ.5900 ಕೋಟಿ ಸಾಲವನ್ನು ಸಾರಿಗೆ ನಿಗಮಗಳಿಗೆ ಬಿಟ್ಟು ಹೋಗಿದ್ದೀರಲ್ಲ—ಅದಕ್ಕೆ ಉತ್ತರವೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಆಡಳಿತಾವಧಿಯಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಇಲ್ಲದಿರುವುದು, ಶೂನ್ಯ ನೇಮಕಾತಿ, ಡೀಸೆಲ್ ಮತ್ತು ನೌಕರರ ಭವಿಷ್ಯ ನಿಧಿ ಹಣ ಬಾಕಿ, ನೌಕರರಿಗೆ ಅರ್ಧ ವೇತನ, ನಿವೃತ್ತ ನೌಕರರ ಉಪಧನ ಮತ್ತು ಪಿಎಫ್ ವರ್ಷಾನುಗಟ್ಟಲೆ ಬಾಕಿ, ವೇತನ ಹೆಚ್ಚಳ ವಿಳಂಬ ಸೇರಿದಂತೆ ಅನೇಕ ಸಮಸ್ಯೆಗಳು ಇದ್ದವು ಎಂದು ಕಾಂಗ್ರೆಸ್ ಪಟ್ಟಿ ಮಾಡಿದೆ. ಜೊತೆಗೆ, ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲೇ 15 ದಿನಗಳ ಸುದೀರ್ಘ ಮುಷ್ಕರ, 3000ಕ್ಕೂ ಹೆಚ್ಚು ನೌಕರರ ವಜಾ ಹಾಗೂ ಅಮಾನತು ಕ್ರಮಗಳು ಬಿಜೆಪಿ ಆಡಳಿತದ ವೈಫಲ್ಯಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಹೇಳಿದೆ.
ಇದರ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 7800 ಹೊಸ ಬಸ್ಸುಗಳ ಸೇರ್ಪಡೆ, 10,000 ನೇರ ನೇಮಕಾತಿ, 1200 ಅನುಕಂಪದ ನೌಕರಿ, 2400ಕ್ಕೂ ಹೆಚ್ಚು ಬಸ್ಸುಗಳ ಪುನಶ್ಚೇತನ, ಡೀಸೆಲ್ ಹಾಗೂ ಪಿಎಫ್ ಪಾವತಿಗೆ ರೂ.2000 ಕೋಟಿ ಸಾಲ ಮತ್ತು ಅದರ ಅಸಲು-ಬಡ್ಡಿಯನ್ನು ಸರ್ಕಾರವೇ ಪಾವತಿಸುತ್ತಿದೆ ಎಂದು ತಿಳಿಸಿದೆ. ನಿವೃತ್ತ ನೌಕರರ ವೇತನ ವ್ಯತ್ಯಾಸ ಪಾವತಿಗೆ ರೂ.224 ಕೋಟಿ ಬಿಡುಗಡೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ನಾಲ್ಕು ಸಾರಿಗೆ ನಿಗಮಗಳಿಗೆ ಇದುವರೆಗೆ ರೂ.12,632.10 ಕೋಟಿ ಪಾವತಿಸಲಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಇಂತಹ ಸ್ಥಿತಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಉಳಿಸುವ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಕಾಂಗ್ರೆಸ್, ಸಾರಿಗೆ ಸಂಸ್ಥೆಗಳನ್ನು ಸಂಪೂರ್ಣವಾಗಿ ಸಶಕ್ತಗೊಳಿಸುವ ಬದ್ಧತೆ ನಮ್ಮದು ಎಂದು ಪುನರುಚ್ಚರಿಸಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿ ಪಡೆದು ಟೀಕೆ ಮಾಡುವಂತೆ ಎಚ್ಚರಿಕೆ ನೀಡಿದ ಕಾಂಗ್ರೆಸ್, ಇಲ್ಲದಿದ್ದರೆ ಇಂತಹ ಟೀಕೆಗಳು ತಾವೇ ಹೊಡೆಸಿಕೊಳ್ಳುವಂತಾಗುತ್ತವೆ ಎಂದು ವ್ಯಂಗ್ಯವಾಡಿದೆ.



Post Comment